ರಶ್ಯ: ಕೊನೆ ಕ್ಷಣದಲ್ಲಿ ವಿಮಾನ ನಿಲ್ದಾಣ ಬದಲಾಯಿಸಿ ನವಾಲ್ನಿಯನ್ನು ಬಂಧಿಸಿದ ಪೊಲೀಸರು

Update: 2021-01-18 16:10 GMT

ಮಾಸ್ಕೋ (ರಶ್ಯ), ಜ. 18: ವಿಷಪ್ರಾಶನಕ್ಕೊಳಗಾಗಿ ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ಚಿಕಿತ್ಸೆ ಪಡೆದು ರಶ್ಯಕ್ಕೆ ವಾಪಸಾದ ಕೆಲವೇ ನಿಮಿಷಗಳಲ್ಲಿ ದೇಶದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯನ್ನು ರಶ್ಯ ಪೊಲೀಸರು ರವಿವಾರ ಬಂಧಿಸಿದ್ದಾರೆ.

ರಶ್ಯ ಸರಕಾರವು ತನ್ನನ್ನು ಬಂಧಿಸಬಹುದೆಂಬ ಎಚ್ಚರಿಕೆಯನ್ನು ಕಡೆಗಣಿಸಿ ಪ್ರತಿಪಕ್ಷ ನಾಯಕ ನವಾಲ್ನಿ ರಶ್ಯಕ್ಕೆ ವಾಪಸಾಗಿದ್ದರು.

ಮಾಸ್ಕೋದ ಶೆರೆಮೆಟ್ಯೆವೊ ವಿಮಾನ ನಿಲ್ದಾಣದಲ್ಲಿರುವ ಪಾಸ್‌ಪೋರ್ಟ್ ನಿಯಂತ್ರಣ ವಿಭಾಗದಲ್ಲಿ ಅವರನ್ನು ಪೊಲೀಸರು ಬಂಧಿಸಿದರು.

ನವಾಲ್ನಿ ಪ್ರಯಾಣಿಸುತ್ತಿದ್ದ ವಿಮಾನವು ಮಾಸ್ಕೋದ ಇನ್ನೊಂದು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದರೂ, ಕೊನೆ ಕ್ಷಣದಲ್ಲಿ ಅದನ್ನು ಶೆರೆಮೆಟ್ಯೆವೊ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ನವಾಲ್ನಿಯನ್ನು ಸ್ವಾಗತಿಸಲು ಅವರು ಮೊದಲು ಇಳಿಯಬೇಕಾಗಿದ್ದ ವಿಮಾನ ನಿಲ್ದಾಣದ ಹೊರಗೆ ಅವರ ಸಾವಿರಾರು ಬೆಂಬಲಿಗರು ನೆರೆದಿದ್ದರು. ಅವರ ಪೈಕಿ ಹಲವರನ್ನು ಪೊಲೀಸರು ಬಂಧಿಸಿದರು. ಘರ್ಷಣೆ ಏರ್ಪಡುವುದನ್ನು ತಪ್ಪಿಸುವುದಕ್ಕಾಗಿ ಕೊನೆ ಕ್ಷಣದಲ್ಲಿ ವಿಮಾನವನ್ನು ತಿರುಗಿಸಲಾಗಿತ್ತು. ಕಪ್ಪು ಮುಖಗವಸುಗಳನ್ನು ಧರಿಸಿದ ನಾಲ್ವರು ಸಮವಸ್ತ್ರಧಾರಿ ಪೊಲೀಸರು ಪಾಸ್‌ಪೋರ್ಟ್ ನಿಯಂತ್ರಣ ವಿಭಾಗದಲ್ಲಿ ನವಾಲ್ನಿಯನ್ನು ವಶಕ್ಕೆ ತೆಗೆದುಕೊಂಡರು.

 ‘‘ಯಾವುದೇ ಕಾರಣ ನೀಡದೆ ಅಲೆಕ್ಸಿಯನ್ನು ಬಂಧಿಸಲಾಗಿದೆ’’ ಎಂದು ಅವರ ವಕೀಲೆ ಓಲ್ಗಾ ಮಿಖೈಲೋವ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಈ ನಡೆಯುತ್ತಿರುವ ಎಲ್ಲವೂ ಕಾನೂನಿಗೆ ವಿರುದ್ಧವಾಗಿದೆ’’ ಎಂದು ಅವರು ನುಡಿದರು.

ಆಗಸ್ಟ್‌ನಲ್ಲಿ ಸೈಬಿರಿಯದಿಂದ ಮಾಸ್ಕೋಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನವಾಲ್ನಿ ಮೇಲೆ ಅತ್ಯಂತ ವಿಷಕಾರಿ ರಾಸಾಯನಿಕವನ್ನು ಪ್ರಯೋಗಿಸಲಾಗಿತ್ತು. ಆರಂಭಿಕ ಚಿಕಿತ್ಸೆಯ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬರ್ಲಿನ್‌ಗೆ ಸಾಗಿಸಲಾಗಿತ್ತು.

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರ ಖಂಡನೆ

 ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ಬಂಧನವನ್ನು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕಲ್ ರವಿವಾರ ಖಂಡಿಸಿದ್ದಾರೆ ಹಾಗೂ ಅವರನ್ನು ತಕ್ಷಣ ನಿಶ್ಶರ್ತವಾಗಿ ಬಿಡುಗಡೆ ಮಾಡುವಂತೆ ರಶ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

‘‘ಬರ್ಲಿನ್‌ನಿಂದ ಹೊರಟು ಮಾಸ್ಕೋಗೆ ಬಂದಿಳಿದ ಅಲೆಕ್ಸಿ ನವಾಲ್ನಿಯ ಬಂಧನ ಅಸ್ವೀಕಾರಾರ್ಹ. ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ರಶ್ಯದ ಅಧಿಕಾರಿಗಳನ್ನು ನಾನು ಒತ್ತಾಯಿಸುತ್ತೇನೆ’’ ಎಂಬುದಾಗಿ ಮೈಕಲ್ ಟ್ವೀಟ್ ಮಾಡಿದ್ದಾರೆ.

ಅವೆುರಿಕದ ಪ್ರಬಲ ಖಂಡನೆ: ಪಾಂಪಿಯೊ

 ಅಲೆಕ್ಸಿ ನವಾಲ್ನಿಯ ಬಂಧನವನ್ನು ಅಮೆರಿಕ ‘ಬಲವಾಗಿ ಖಂಡಿಸುವುದು’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ರವಿವಾರ ಹೇಳಿದ್ದಾರೆ.

‘‘ರಶ್ಯದ ನಾಯಕರನ್ನು ಟೀಕಿಸುವ ನವಾಲ್ನಿ ಮತ್ತು ಇತರ ಪ್ರತಿಪಕ್ಷ ನಾಯಕರು ಹಾಗೂ ಸ್ವತಂತ್ರ ಧ್ವನಿಗಳನ್ನು ದಮನಿಸುವ ಸರಣಿ ಪ್ರಯತ್ನಗಳ ಭಾಗವಾಗಿ ಈ ಬಂಧನ ನಡೆದಿದೆ. ಇದು ಕಳವಳಕಾರಿ ವಿದ್ಯಮಾನವಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಪಾಂಪಿಯೊ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News