ಅರ್ನಬ್, ದಾಸ್‌ಗುಪ್ತಾ ವ್ಯಾಟ್ಸ್ ಆ್ಯಪ್ ಚಾಟ್ ತನಿಖೆಗೆ ಜಂಟಿ ಸಂಸದೀಯ ಸಮಿತಿ ರೂಪಿಸಿ: ಎನ್‌ಸಿಪಿ

Update: 2021-01-18 16:38 GMT

ಮುಂಬೈ, ಜ. 18: ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಬ್ರಾಡ್‌ಕಾಸ್ಟ್ ಅಡಿಯನ್ಸ್ ರಿಸರ್ಚ್ ಕೌನ್ಸಿಲ್(BARC)‌ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತಾ ನಡುವಿನ ವ್ಯಾಟ್ಸ್ ಆ್ಯಪ್ ಚಾಟ್ ಕುರಿತ ತನಿಖೆಗೆ ಜಂಟಿ ಸಂಸದೀಯ ಸಮಿತಿ ರೂಪಿಸುವಂತೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೋಮವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಬಾಲಕೋಟ್ ವಾಯು ದಾಳಿ ಬಗ್ಗೆ ಅರ್ನಬ್ ಗೋಸ್ವಾಮಿ ಅವರಿಗೆ ಮೊದಲೇ ತಿಳಿದಿತ್ತು ಎಂಬುದನ್ನು ವ್ಯಾಟ್ಸ್ ಆ್ಯಪ್ ಚಾಟ್‌ನಲ್ಲಿ ಬಹಿರಂಗಗೊಂಡಿರುವ ಬಗ್ಗೆ ಮಾದ್ಯಮಗಳು ಮಾಡಿರುವ ವರದಿಯನ್ನು ಉಲ್ಲೇಖಿಸಿ ಎನ್‌ಸಿಪಿಯ ಮುಖ್ಯ ವಕ್ತಾರ ಮಹೇಶ್ ತಾಪ್ಸೆ, ‘‘ಟಿಆರ್‌ಪಿ ಪಡೆಯಲು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ತಿಳಿದಾಗ ತೀವ್ರ ಆಘಾತವಾಯಿತು’’ ಎಂದು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ನಾನು ಮಂಗಳವಾರ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಭೇಟಿಯಾಗಲಿದ್ದೇನೆ ಹಾಗೂ ವ್ಯಾಟ್ಸ್ ಆ್ಯಪ್ ಚಾಟ್‌ಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸ್ಪಷ್ಟನೆ ಕೋರಲಿದ್ದೇನೆ ಎಂದು ತಾಪ್ಸೆ ಹೇಳಿದ್ದಾರೆ. ‘‘ಇಂತಹ ಅತಿ ಸೂಕ್ಷ್ಮ ವಿಷಯ ಅರ್ನಬ್ ಗೋಸ್ವಾಮಿಗೆ ಹೇಗೆ ತಿಳಿಯುತು ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಮೂಲವನ್ನು ಗುರುತಿಸಬೇಕು ಹಾಗೂ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’’ ಎಂದು ಅವರು ಆಗ್ರಹಿಸಿದ್ದಾರೆ. ಮುಂಬೈ ಪೊಲೀಸರು ಹಾಗೂ ರಾಜ್ಯದಲ್ಲಿರುವ ಮಹಾ ವಿಕಾಸ್ ಅಘಾಡಿ ಸರಕಾರದ ವರ್ಚಸಿಗೆ ಧಕ್ಕೆ ಉಂಟು ಮಾಡುವುದರಲ್ಲಿ ಗೋಸ್ವಾಮಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ತಾಪ್ಸೆ ಪ್ರತಿಪಾದಿಸಿದ್ದಾರೆ.

 ‘‘ಅವರು ತಮ್ಮ ಚರ್ಚೆಯಲ್ಲಿ ಪಾಲ್ಘಾರ್ ಘಟನೆಗೆ ಕೋಮು ಆಯಾಮ ನೀಡಲು ಪ್ರಯತ್ನಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣವನ್ನು ನಕಾರಾತ್ಮಕವಾಗಿ ನಿರೂಪಿಸಿದ್ದರು. ಇದಲ್ಲವನ್ನೂ ಮಹಾ ವಿಕಾಸ ಅಘಾಡಿ ಸರಕಾರವನ್ನು ಅಸ್ಥಿರಗೊಳಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ’’ ಎಂದು ತಾಪ್ಸೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News