ಅಲ್ಪಸಂಖ್ಯಾತರ ಆಯೋಗಕ್ಕೆ ಮುಸ್ಲಿಂ ಒಕ್ಕೂಟ ಮನವಿ

Update: 2021-01-18 17:04 GMT

ಮಂಗಳೂರು, ಜ.18: ದ.ಕ.ಜಿಲ್ಲೆಯ ಮುಸ್ಲಿಮರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸೋಮವಾರ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮುಂದಿಟ್ಟ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ನಿಯೋಗವು ಅವುಗಳಿಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದೆ.

ಒಕ್ಕೂಟದ ಅಧ್ಯಕ್ಷರೂ ಆಗಿರುವ ಮಾಜಿ ಮೇಯರ್ ಕೆ.ಅಶ್ರಫ್ ನೇತೃತ್ವದ ನಿಯೋಗವು ಕೇಂದ್ರ ಸರಕಾರ ಅಂಗೀಕರಿಸಿದ ಎನ್‌ಆರ್‌ಸಿ. ಕಾಯ್ದೆಯು ದೇಶದ ಸರ್ವಜನತೆಯ ಪೌರತ್ವಕ್ಕೆ ಧಕ್ಕೆ ತರಲಿದೆ. ಅದರಲ್ಲೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ತೀವ್ರ ಮಾರಕವಾಗಲಿದ್ದು, ಈ ಕಾನೂನಿನ ಅನುಷ್ಟಾನದ ವಿರುದ್ಧ ಜಿಲ್ಲಾದ್ಯಂತ ನಡೆದ ಪ್ರತಿಭಟನೆಯ ಭಾಗವಾಗಿ 2019ರ ಡಿ.19ರಂದು ಮಂಗಳೂರು ಗೋಲಿಬಾರ್ ನಡೆದಿದೆ. ಇದರಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಹಲವು ಯುವಕರ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಪೊಲೀಸರ ಪೂರ್ವನಿಯೋಜಿತ ಪ್ರಕರಣ ಇದಾಗಿದ್ದು, ಸರಕಾರ ಅಮಾಯಕರ ಮೇಲೆ ದಾಖಲಿಸಿದ್ದ ಅದರಲ್ಲೂ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಮೇಲಿನ ಪ್ರಕರಣ ಕೈಬಿಡಬೇಕು ಎಂದು ಮನವಿ ಸಲ್ಲಿಸಿದೆ.

ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಅಂದು ಕರ್ತವ್ಯದಲ್ಲಿದ್ದ ಉನ್ನತ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಅಧೀನ ಅಧಿಕಾರಿಗಳು ಜಿಲ್ಲೆಯ ಖಾಝಿಗಳಾದ ತ್ವಾಕಾ ಅಹ್ಮದ್ ಮುಸ್ಲಿಯಾರ್‌ಅವರನ್ನು ಠಾಣೆಗೆ ಕರೆಯಿಸಿ ಪೊಲೀಸರ ಪರವಾಗಿ ಮತ್ತು ಅಮಾಯಕ ಯುವಕರ ವಿರುದ್ಧ ಸಾಕ್ಷಿ ಹೇಳುವಂತೆ ಪ್ರೇರೇಪಿಸಿದ್ದಾರೆ. ಈ ಪ್ರಕರಣದಲ್ಲಿ ಖಾಝಿಗಳ ಹೇಳಿಕೆಯನ್ನು ತಿರುಚಿ ಮಹಜರು ನಡೆಸಿದ ಪೊಲೀಸರ/ಅಧಿಕಾರಿಗಳ ಕೃತ್ಯದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮನವಿ ಮಾಡಲಾಗಿದೆ.

2020ರ ಡಿಸೆಂಬರ್‌ನಲ್ಲಿ ನಡೆದ ಗ್ರಾಪಂ ಚುನಾವಣಾ ಫಲಿತಾಂಶ ಘೋಷಣೆಯ ದಿನ ಉಜಿರೆಯಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕರ್ತರು ವಿಜೇತ ಅಭ್ಯರ್ಥಿಗಳ ಪರ ಮತ್ತು ಪಕ್ಷದ ಜಯ ಘೋಷಣೆ ಸಂಭ್ರಮಿಸುವ ಸಂದರ್ಭ ಭಿನ್ನ ರಾಜಕೀಯ ಪಕ್ಷದ ಕಾರ್ಯಕರ್ತರು ದೇಶ ವಿರೋಧಿ ಘೋಷಣೆ ಕೂಗಿದ್ದಾರೆ. ಆದರೆ ಪೊಲೀಸರು ಈ ಪ್ರಕರಣದಲ್ಲಿ ಮುಸ್ಲಿಂ ಯುವಕರನ್ನು ಬಂಧಿಸಿ ಅನ್ಯಾಯ ಎಸಗಿದ್ದಾರೆ. ಹಾಗಾಗಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ನಿಯೋಗ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News