ಉದ್ಧವ್ ಠಾಕ್ರೆ ಹೇಳಿಕೆಗೆ ಕಲ್ಕೂರಾ ಖಂಡನೆ

Update: 2021-01-18 17:09 GMT

ಮಂಗಳೂರು, ಜ.18: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಕಾರವಾರದಿಂದ ಬೆಳಗಾಯವರೆಗಿನ ಪ್ರದೇಶವನ್ನು ಮಹಾರಾಷ್ಟ್ರ ವಶಪಡಿಸಿಕೊಳ್ಳಲಿದೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿರುವ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮಹಾರಾಷ್ಟ್ರ ಮುಖ್ಯಮಾಂತ್ರಿಯು ರಾಜ್ಯದ ಮುಗ್ಧ ಜನರ ಭಾವನೆಗಳನ್ನು ಕೆರಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ ತಕ್ಷಣ ಮಹಾಜನ ಆಯೋಗದ ವರದಿಯನ್ನು ಜಾರಿಗೊಳಿಸುವುದೊಂದೇ ಮಹಾರಾಷ್ಟ್ರ ಮುಖ್ಯಮಂತ್ರಿಯ ಉದ್ಧಟತನದ ಹಾಗೂ ವಿಕೃತ ಧೋರಣೆಗಳಿಗೆ ಪರಿಹಾರ ಎಂದು ಕಲ್ಕೂರಾ ಅಭಿಪ್ರಾಯಪಟ್ಟಿದ್ದಾರೆ.

ಒಂದೇ ರಾಷ್ಟ್ರವೆಂಬ ಛತ್ರದಡಿ ಹಲವಾರು ಭಾಷೆ ಹಾಗೂ ಸಂಸ್ಕೃತಿಗಳ ಜನತೆ ಒಟ್ಟಾಗಿ ಬದುಕುತ್ತಿದ್ದು, ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಸಂದರ್ಭ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ರೊಚ್ಚಿಗೆಬ್ಬಿಸುವ ಪ್ರಯತ್ನ ಖಂಡನೀಯ. ಭಾಷಾವಾರು ಪ್ರಾಂತ ವಿಂಗಡನೆಯಾದ ಬಳಿಕ ಗಡಿಸಮಸ್ಯೆ ಪ್ರತಿಯೊಂದು ರಾಜ್ಯಗಳಲ್ಲೂ ಇದೆ. ಆದರೆ ಇಂತಹ ವಿಕೃತ ಮನಸ್ಸಿನ ರಾಜಕಾರಣಿಗಳ ಧೋರಣೆ ಹಾಗೂ ಪ್ರವೃತ್ತಿಗೆ ತಡೆ ಹಾಕಬೇಕಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News