ನೇತ್ರಾವತಿ ಸೇತುವೆಯಲ್ಲಿ ‘ನಮ್ಮ ನೇತ್ರಾವತಿ, ನಮ್ಮ ಜವಾಬ್ದಾರಿ’ ಅಭಿಯಾನಕ್ಕೆ ಚಾಲನೆ

Update: 2021-01-18 17:13 GMT

ಮಂಗಳೂರು, ಜ.18: ಎಪಿಡಿ ಪ್ರತಿಷ್ಠಾನ-ಹಸಿರು ದಳವು ಜನಜಾಗೃತಿ ಮೂಡಿಸಲು ಮತ್ತು ಜನರು ನೇತ್ರಾವತಿ ನದಿಗೆ ತ್ಯಾಜ್ಯವನ್ನು ಎಸೆಯದಂತೆ ತಡೆಯಲು ನೇತ್ರಾವತಿ ಸೇತುವೆಯಲ್ಲಿ ‘ನಮ್ಮ ನೇತ್ರಾವತಿ, ‘ನಮ್ಮ ಜವಾಬ್ದಾರಿ’ ಎಂಬ ವಿಶಿಷ್ಟ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಮಂಗಳೂರು ಮಹಾನಗರಪಾಲಿಕೆ ಮತ್ತು ಉಳ್ಳಾಲ ನಗರಸಭೆಯ ಸಹಕಾರದೊಂದಿಗೆ ನಡೆಯುವ ಅಭಿಯಾನವು ಜ.23ರವರೆಗೆ ನಡೆಯಲಿದೆ. ಪ್ರತೀ ದಿನ ಬೆಳಿಳಗ್ಗೆ 6ರಿಂದ 9ರವರೆಗೆ ನಡೆಯುವ ಅಭಿಯಾನದಲ್ಲಿ ವಿವಿಧ ಸಂಸ್ಥೆಗಳ ಹಲವು ಸ್ವಯಂಸೇವಕರು ಸೇತುವೆಯುದ್ದಕ್ಕೂ ಒಗ್ಗೂಡಿ ತ್ಯಾಜ್ಯವನ್ನು ನದಿಗೆ ಎಸೆಯದಂತೆ ಜಾಗೃತಿ ಮೂಡಿಸುತ್ತಾರೆ. ‘ಮಾನವ ಸರಪಳಿ’ ರೂಪಿಸುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಯೋಜಿಸಲಾಗಿದೆ.

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉಳ್ಳಾಲ ನಗರ ಸಭೆಯ ಆಯುಕ್ತ ರಾಯಪ್ಪಪಾಲ್ಗೊಂಡು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನೇತ್ರಾವತಿ ನದಿಯ ಬೆಂಗ್ರೆ ಭಾಗದಲ್ಲಿ ಮಾಲಿನ್ಯ ನಿಯಂತ್ರಣ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಸ್ವಯಂಸೇವಕ ಯುವ ಸಮೂಹವಾದ ‘ಬಾಸ್ಕಿಯೋರ್ಬ್ಸ್’ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿತು. ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ ಮತ್ತು ‘ಬಿಗ್ ಬ್ಯಾಂಗ್’ ಖ್ಯಾತಿಯ ಮುಹಮ್ಮದ್ ಫೌಜನ್, ಹಸೀರು ದಳದ ನಾಗರಾಜ ರಾಘವ ಅಂಚನ್, ಎಪಿಡಿ ಪ್ರತಿಷ್ಠಾನದ ವಾಣಿಶ್ರೀ ಬಿ.ಆರ್. ಮತ್ತಿತರರು ಪಾಲ್ಗೊಂಡಿದ್ದರು.

‘ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿ ಮಾಲಿನ್ಯ ಮುಕ್ತವಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಜನರು ತ್ಯಾಜ್ಯವನ್ನು ನದಿಗೆ ಎಸೆಯುವುದನ್ನು ನಿಲ್ಲಿಸುವ ಬಗ್ಗೆ ಸಂಕಲ್ಪ ಮಾಡಬೇಕು.ನದಿಗೆ ಎಸೆದ ತ್ಯಾಜ್ಯ ಅಂತಿಮವಾಗಿ ಸಮುದ್ರ ವನ್ನು ತಲುಪುತ್ತದೆ. ತ್ಯಾಜ್ಯವನ್ನು ಎಸೆಯುವ ಈ ಅನಾರೋಗ್ಯಕರ ಅಭ್ಯಾಸವನ್ನು ನಿಲ್ಲಿಸಲು ಮನವಿ ಮಾಡುತ್ತಿದ್ದೇವೆ’ ಎಂದು ಎಪಿಡಿ ಪ್ರತಿಷ್ಠಾನದ ಸಿಇಒ ಮತ್ತು ಸ್ಥಾಪಕ ಅಬ್ದುಲ್ಲಾ ಎ. ರೆಹಮಾನ್ ಹೇಳಿದರು.

ಸಮಾಜದ ಉಳಿಗಾಗಿ ಜಲ ಸಂಪನ್ಮೂಲಗಳು ಅಮೂಲ್ಯವಾಗಿವೆ. ತ್ಯಾಜ್ಯ ಹೆಚ್ಚಾದಂತೆ ಅದರ ಸೂಕ್ತ ವಿಲೇವಾರಿಯ ಜವಾ ಬ್ದಾರಿಯೂ ಎಲ್ಲರದ್ದಾಗಿದೆ. ಸುಸ್ಥಿರ ಜೀವನವನ್ನು ಅಭ್ಯಸಿಸುವುದು ಈಗ ಅಗತ್ಯವಾಗಿದೆ ಎಂದು ಹಸಿರು ದಳ ಸಹ ಸಂಸ್ಥಾಪಕಿ ನಳಿನಿ ಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News