ಮಲಬಾರ್ ಗೋಲ್ಡ್, ಕಳತ್ತೂರು ಸಮಾಜ ಸೇವಾ ವೇದಿಕೆ: ಸಮಾಜಮುಖಿ ಕಾರ್ಯಕ್ರಮ

Update: 2021-01-18 17:29 GMT

ಕಾಪು : ಸಮಾಜ ಸೇವಾ ವೇದಿಕೆ ಕಳತ್ತೂರು - ಕಾಪು, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಇದರ ಅಧೀನದಲ್ಲಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನಾರೋಗ್ಯ ಪೀಡಿತರಿಗೆ ಪ್ರತೀ ತಿಂಗಳ ಉಚಿತ ಮೆಡಿಸಿನ್‍ಗೆ ಧನ ಸಹಾಯ, ಆರೋಗ್ಯ ಮಾಹಿತಿ ಕಾರ್ಯಕ್ರಮ, ಆರೋಗ್ಯ ಮಾಹಿತಿ ಪುಸ್ತಕ ಬಿಡುಗಡೆ ಮತ್ತು ಸಮಾಜ ಸೇವಕರಿಗೆ ಸಮ್ಮಾನ, ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮವು ರವಿವಾರ ಕಳತ್ತೂರು ಕುಶಲ ಶೇಖರ ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಗ್ರಾಮೀಣ ಭಾಗದ ಬಡ ಕುಟುಂಬ ಗಳನ್ನು ನಿರಂತರವಾಗಿ ಗುರುತಿಸುತ್ತಾ ಬರುತ್ತಿರುವ ಕಳತ್ತೂರು ಸಮಾಜ ಸೇವಾ ವೇದಿಕೆಯ ಜೊತೆಗೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆಯ ಸಮಾಜ ಸೇವಾ ಕಾರ್ಯಗಳು ಶ್ಲಾಘನೀಯವಾಗಿದೆ ಎಂದರು. 

ಸಾಹಿತಿ ದಯಾನಂದ ಕೆ. ಶೆಟ್ಟಿ ದೆಂದೂರುಕಟ್ಟೆ ಅವರ ಸ್ಪಿರುಲಿನಾ ಪೋಷಕಾಂಶಗಳ ರಾಣಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಾಪು-ಕಳತ್ತೂರು ಸಮಾಜ ಸೇವಾ ವೇದಿಕೆಯ ವತಿಯಿಂದ ಉಡುಪಿ ಮಲಬಾರ್ ಗೊಲ್ಡ್ ಮತ್ತು ಡೈಮಂಡ್ಸ್‍ನ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್, ಮಾರ್ಕೆಟಿಂಗ್ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಇವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಸಮ್ಮಾ ನಿಸಿ ಗೌರವಿಸಲಾಯಿತು. ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೋಪಾಲಕೃಷ್ಣ ಭಟ್, ಗ್ಲಾಡಿಸ್ ಅಲ್ಮೇಡಾ, ಅಶೋಕ್ ಶೇರಿಗಾರ್, ಸುಧಾವತಿ, ನಯನ ಪ್ರಭಾವತಿ ಅವರನ್ನು ಗೌರವ ಸಮ್ಮಾನದೊಂದಿಗೆ ಅಭಿನಂದಿಸಲಾಯಿತು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಾಪು-ಕಳತ್ತೂರು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಫಾರೂಕ್ ಚಂದ್ರನಗರ ಅಧ್ಯಕ್ಷತೆ ವಹಿಸಿದ್ದರು. ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ, ಪರ್ಕಳ ಬಳಕೆದಾರರ ವೇದಿಕೆಯ ಅಜೀವ ಗೌರವಾಧ್ಯಕ್ಷ ಹಾಜಿ ಕೆ. ಅಬೂಬಕರ್, ಅನಿವಾಸಿ ಭಾರತೀಯ ಉದ್ಯಮಿ ಶೇಖರ ಬಿ. ಶೆಟ್ಟಿ ಅಬುಧಾಬಿ, ಉದ್ಯಮಿ ವಿಲ್ಸನ್ ಕುಂದರ್, ಬೆಹರಿನ್ ಉದ್ಯಮಿ ಜೆಸಿಂತ ಬರ್ಬೊಜ ಕಳತ್ತೂರು, ಗೌರವ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ ಕಳತ್ತೂರು, ಉಪಾಧ್ಯಕ್ಷ ರಾಜೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

ಸಮಾಜ ಸೇವಾ ವೇದಿಕೆಯ ಸಂಚಾಲಕ ದಿವಾಕರ ಡಿ. ಶೆಟ್ಟಿ ಸ್ವಾಗತಿಸಿದರು. ಸಾಹಿತಿ ದಯಾನಂದ ಕೆ. ಶೆಟ್ಟಿ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕರಂದಾಡಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News