ಪೊಲೀಸ್ ಮುಖ್ಯ ಪೇದೆಗೆ ಹಲ್ಲೆ ಪ್ರಕರಣ: 'ಗೋಲಿಬಾರ್ ಪ್ರಕರಣಕ್ಕೆ ಸೇಡು'

Update: 2021-01-19 09:06 GMT

ಮಂಗಳೂರು, ಜ.19: ನಗರದ ನ್ಯೂಚಿತ್ರಾ ಟಾಕೀಸು ಸಮೀಪ 2020ರ ಡಿ. 16ರಂದು ಪೊಲೀಸ್ ಕಾನ್‌ಸ್ಟೆಬಲ್ ಮೇಲಿನ ಹಲ್ಲೆ ಪ್ರಕರಣವು 2019ರ ಡಿಸೆಂಬರ್ 19ರಂದು ನಡೆದ ಪೊಲೀಸ್ ‌ಗೋಲಿಬಾರ್ ಪ್ರಕರಣದ ಪ್ರತೀಕಾರವಾಗಿ ನಡೆದಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಬಾಲಕ ಸೇರಿ ಈ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು, ಇದೀಗ ಮತ್ತೆ ಹೆಚ್ಚುವರಿಯಾಗಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಬಂಧಿತರನ್ನು ಕುದ್ರೋಳಿ ನಿವಾಸಿಗಳಾದ 22ರ ಹರೆಯದ ಅನಿಶ್ ಅಶ್ರಫ್, 23ರ ಹರೆಯದ ಅಬ್ದುಲ್ ಖಾದರ್ ಫಹದ್, 31ರ ಹರೆಯದ ಶೇಕ್ ಮುಹಮ್ಮದ್ ಹಾರಿಸ್, 24ರ ಹರೆಯದ ಮುಹಮ್ಮದ್ ಕೈಝ್, 18ರ ಹರೆಯದ ರಾಹಿಲ್ ‌ಹಾಗೂ 30ರ ಹರೆಯದ ಮುಹಮ್ಮದ್ ನವಾಝ್ ಎಂದು ಗುರುತಿಸಲಾಗಿದೆ.

ಅನಿಶ್ ಅಶ್ರಫ್ ಹಾಗೂ ಅಬ್ದುಲ್ ಖಾದರ್ ಧಕ್ಕೆಯಲ್ಲಿ ಫಿಶಿಂಗ್ ಕೆಲಸದಲ್ಲಿದ್ದು, ಮುಹಮ್ಮದ್ ನವಾಝ್ ನಗರದ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. 2019ರ ಡಿಸೆಂಬರ್ 19ರಂದು ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂದರ್ಭ ಪೊಲೀಸರಿಂದ ತಮ್ಮವರಿಗೆ ತೊಂದರೆ ಆಗಿದ್ದು, ಅದರ ಸೇಡಿನ ಕ್ರಮಕ್ಕಾಗಿ ಸ್ಥಳೀಯ ಎರಡು ಗ್ಯಾಂಗ್‌ಗಳು ಸೇರಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆಸಿದೆ. ಆರೋಪಿಗಳು ಡಿಸೆಂಬರ್ 19ರಂದೇ ಕೃತ್ಯ ನಡೆಸಲು ಮುಂದಾಗಿದ್ದರು. ಆದರೆ ಆ ದಿನ ಕೃತ್ಯ ನಡೆಸಿದರೆ ಹೆಚ್ಚಿನ ಬಂದೋಬಸ್ತ್ ಇರುವ ಹಿನ್ನೆಲೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುವ ಸಾಧ್ಯತೆ ಇದ್ದ ಕಾರಣ ಆರೋಪಿಗಳು ತಮ್ಮ ಕೃತ್ಯಕ್ಕೆ ಎರಡು ದಿನಗಳ ಮುಂಚಿತವಾಗಿಯೇ ಸಂಚು ರೂಪಿಸಿದ್ದರು. ಆರಂಭದಲ್ಲಿ ಈ ಕೃತ್ಯವನ್ನು ಈಗಾಗಲೇ ಅಪರಾಧ ಪ್ರಕರಣಗಳನ್ನು ಹೊಂದಿರುವ ಅನಿಶ್ ಎಂಬಾತ ನಡೆಸಲು ಮುಂದಾಗಿದ್ದ ಆದರೆ ಇದರಿಂದ ಪೊಲೀಸರಿಗೆ ಅನುಮಾನ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನ ಮೂಲಕ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಗಣೇಶ್ ಕಾಮತ್ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣ ನಡೆದ ಬಳಿಕ ಆರೋಪಿ ನವಾಝ್ ಎಂಬಾತ ಪೊಲೀಸರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಮಾಹಿತಿಯನ್ನು ನೀಡಿದ್ದ ಎಂಬುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ವಿವರ ನೀಡಿದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

ಅಮಲು ಬರಿಸುವ ಟ್ಯಾಬ್ಲೆಟ್‌ಗಳ ಬಳಕೆ !

ಈ ಪ್ರಕರಣದಲ್ಲಿ ವೈದ್ಯರ ಸಲಹೆಯ ಮೇರೆಗೆ ಮೆಡಿಕಲ್‌ನಲ್ಲಿ ನೀಡಬಹುದಾದ (ಬಹುತೇಕವಾಗಿ ಹಿರಿಯ ನಾಗರಿಕರಲ್ಲಿ ಕಂಡು ಬರುವ ಕಿರಿಕಿರಿ ತಪ್ಪಿಸಲು ನೀಡುವಂತಹ ಟ್ಯಾಬ್ಲೆಟ್) ಟ್ಯಾಬ್ಲೆಟ್‌ಗಳನ್ನು ಬಳಸಿಕೊಂಡು ಕೃತ್ಯ ನಡೆಸಿರುವುದು ತನಿಖೆಯ ವೇಳೆ ಕಂಡು ಬಂದಿದೆ. ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸಕ್ಕಿರುವ ಮುಹಮ್ಮದ್ ನವಾಝ್ ಸ್ಟ್ರಿಪ್ ಒಂದಕ್ಕೆ (10 ಟ್ಯಾಬ್ಲೆಟ್‌ಗಳು) 60 ರೂ.ಗಳಿಗೆ ಸಿಗುವ ಮಾತ್ರೆಯನ್ನು 600 ರೂ.ಗಳಿಗೆ ಮಾರಾಟ ಮಾಡಿರುವುದು ಕೂಡಾ ಸಾಬೀತಾಗಿದೆ. ಈ ಕೃತ್ಯದಲ್ಲಿ ಸ್ಥಳೀಯವಾಗಿ ಮಾಯಾ ಗ್ಯಾಂಗ್ ಎಂದು ಗುರುತಿಸಿಕೊಂಡಿರುವ ತಂಡದ ಜತೆಗೆ ಇನ್ನೊಂದು ತಂಡ ಸೇರಿ ಅತ್ಯಂತ ವ್ಯವಸ್ಥಿತವಾಗಿ ಪಿತೂರಿ ನಡೆಸಿರುವುದು ಕಂಡು ಬಂದಿದ್ದು, ಇನ್ನೊಂದು ತಂಡದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಲಾಗಿದೆ. ಅವರನ್ನು ಬಂಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಕೊಲೆ ಪ್ರಕರಣವಾಗಿ ದಾಖಲಿಸಲಾಗಿದ್ದು, ಪ್ರಕರಣ ನಡೆದ ದಿನ ಅಪ್ರಾಪ್ತ ಬಾಲಕ 3ರಿಂದ 6ರಷ್ಟು ಈ ಟ್ಯಾಬ್ಲೆಟ್‌ಗಳನ್ನು ಸೇವಿಸಿ ಕೃತ್ಯ ನಡೆಸಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.

ಅಪರಾಧ ಪ್ರಕರಣವಾಗಿ ಮಾತ್ರ ಪರಿಗಣನೆ

ಈ ಪ್ರಕರಣದಲ್ಲಿ ಯಾವುದಾದರೂ ಸಂಘಟನೆಗಳು, ಪಕ್ಷಗಳು ಭಾಗಿಯಾಗಿವೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್,ಇದನ್ನು ನಾವು ಪೊಲೀಸ್ ಮುಖ್ಯ ಪೇದೆಯ ಮೇಲಿನ ಅಪರಾಧ ಪ್ರಕರಣವಾಗಿ ಮಾತ್ರವೇ ಪರಿಗಣಿಸಿದ್ದೇವೆ. ಸದ್ಯದ ತನಿಖಾ ಹಂದಲ್ಲಿ ಅಪರಾಧಕ್ಕೆ ಸಂಬಂಧಿಸಿದ ಆರೋಪಿಗಳು ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News