ರಾಮಮಂದಿರ ದೇಣಿಗೆ ರ‍್ಯಾಲಿಯಲ್ಲಿ ಹಿಂಸಾಚಾರ: 40 ಮಂದಿ ಬಂಧನ

Update: 2021-01-19 10:16 GMT
photo: ndtv.com

ಹೊಸದಿಲ್ಲಿ,ಜ.19: ರವಿವಾರ ಗುಜರಾತ್‍ನ ಕಚ್ಛ್ ಜಿಲ್ಲೆಯ ಕಿದಾನ ಎಂಬ ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಉದ್ದೇಶದಿಂದ ಆಯೋಜಿಸಲಾಗಿದ್ದ ರ‍್ಯಾಲಿ ವೇಳೆ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಪೊಲೀಸರ ಸಹಿತ ಹಲವಾರು ಮಂದಿ ಇತರರು ಗಾಯಗೊಂಡಿದ್ದರು. ಈ ಸಂಬಂಧ ಕನಿಷ್ಠ 40 ಜನರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಕೊಲೆ, ಹಿಂಸಾಚಾರ ಹಾಗೂ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ ಎಂದು ndtv.com ವರದಿ ಮಾಡಿದೆ.

 "ವಿಶ್ವ ಹಿಂದು ಪರಿಷದ್ ಆಯೋಜಿಸಿದ್ದ ಈ ದೇಣಿಗೆ ಸಂಗ್ರಹ ರ‍್ಯಾಲಿ ವೇಳೆ ಕೂಗಲಾದ ಘೋಷಣೆಗಳು ಇನ್ನೊಂದು ಸಮುದಾಯದ ಮಂದಿಯನ್ನು ಪ್ರಚೋದಿಸಿತ್ತು ಹಾಗೂ ಇದು ಜನರು ಕತ್ತಿ  ಹಾಗೂ ಬೆತ್ತಗಳನ್ನು ಹಿಡಿದು ಹಿಂಸಾತ್ಮಕ ಘರ್ಷಣೆ ನಡೆಸಲು ನಾಂದಿಯಾಯಿತು" ಎಂದು ಗಾಯಾಳು ಪೊಲೀಸ್ ಸಿಬ್ಬಂದಿಯೊಬ್ಬರು ನೀಡಿದ ದೂರಿನಲ್ಲಿ ಹೇಳಲಾಗಿದೆ. ಕೊನೆಗೆ ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ರ್ಯಾಲಿಯ ನಂತರ ಘಟನೆ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಜಾರ್ಖಂಡ್ ಮೂಲದ ವಲಸಿಗ ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿತ್ತು. ಆತ ಹಿಂಸಾಚಾರದ ವೇಳೆ ಮೃತಪಟ್ಟಿದ್ದನೇ ಎಂದು ತಿಳಿಯಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದೇಣಿಗೆ ಸಂಗ್ರಹ ರ್ಯಾಲಿ ನಡೆಸಲು  ಸಂಘಟನೆ ಅಗತ್ಯ ಅನುಮತಿ ಹೊಂದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹ ಉದ್ದೇಶದಿಂದ  ಮಧ್ಯ ಪ್ರದೇಶದ ಇಂದೋರ್, ಉಜ್ಜಯನಿ ಹಾಗೂ ಮಂಡ್ಸೌರ್ ಜಿಲ್ಲೆಗಳಲ್ಲಿ ನಡೆದ ರ್ಯಾಲಿಗಳ ಸಂದರ್ಭವೂ ಹಿಂಸೆ ನಡೆದ ಬಗ್ಗೆ ಈಗಾಗಲೇ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News