ಹೊಸ ಅಪ್ಡೇಟ್ ಅನ್ನು ವಾಪಸ್ ಪಡೆಯುವಂತೆ ವಾಟ್ಸ್ಯಾಪ್ ಗೆ ಪತ್ರ ಬರೆದ ಭಾರತ ಸರಕಾರ

Update: 2021-01-19 11:11 GMT

ಹೊಸದಿಲ್ಲಿ,ಜ.19: ಜನಪ್ರಿಯ ಮೆಸೆಂಜರ್ ಆ್ಯಪ್ ವಾಟ್ಸ್ಯಾಪ್ ತನ್ನ ಭಾರತೀಯ ಬಳಕೆದಾರರಿಗೆ ಜಾರಿಗೊಳಿಸಲುದ್ದೇಶಿಸಿರುವ  ಪ್ರೈವೆಸಿ ಪಾಲಿಸಿ (ಗೌಪ್ಯತಾ ನೀತಿ) ಅಪ್ಡೇಟ್ ಅನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಭಾರತ ಸರಕಾರ ವಾಟ್ಸ್ಯಾಪ್ ಸಿಇಒ ವಿಲ್ ಕಾಥರ್ಟ್ ಅವರಿಗೆ ಪತ್ರ ಬರೆದಿದೆ.

ಭಾರತದಲ್ಲಿ ಭಾರೀ ಆಕ್ರೋಶ ಸೃಷ್ಟಿಸಿರುವ ವಾಟ್ಸ್ಯಾಪ್‍ನ ಪ್ರಸ್ತಾವಿತ ಪ್ರೈವೆಸಿ ಪಾಲಿಸಿ ಅಪ್ಡೇಟ್ ಕುರಿತಂತೆ ಸರಕಾರ ಸಂಸ್ಥೆಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದೆ. ಯುರೋಪಿಯನ್ ಯೂನಿಯನ್ ದೇಶಗಳು ಹಾಗೂ ಭಾರತಕ್ಕೆ ಪ್ರತ್ಯೇಕ ಗೌಪ್ಯತಾ ನೀತಿಗಳೇಕೆ ಎಂದು ಸರಕಾರ ಪ್ರಶ್ನಿಸಿದೆಯೆನ್ನಲಾಗಿದ್ದು ಭಾರತಕ್ಕೆ ಪ್ರತ್ಯೇಕ ನೀತಿ ಒಂದು ರೀತಿಯ ತಾರತಮ್ಯಕಾರಿ ಧೋರಣೆಯಾಗಿದೆ ಎಂದೂ ಹೇಳಿದೆ.

ಗೌಪ್ಯತಾ ನೀತಿ ಅಪ್ಡೇಟ್ ಹಾಗೂ ಫೇಸ್ ಬುಕ್ ಜತೆ ಡಾಟಾ ಶೇರಿಂಗ್  ಭಾರತೀಯ ಬಳಕೆದಾರರಿಗೆ ಪ್ರತಿಕೂಲವಾಗಲಿದೆ ಎಂದೂ  ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ ಹೇಳಿದೆ. ಭಾರತದ ಸಂಸತ್ತು ವೈಯಕ್ತಿಕ ಡಾಟಾ ರಕ್ಷಣೆ ಮಸೂದೆಯನ್ನು ಪರಿಗಣಿಸುವ ಸಾಧ್ಯತೆಯಿರುವ ಸಂದರ್ಭದಲ್ಲಿ ಇಂತಹಾ ನೀತಿಯನ್ನೇಕೆ ವಾಟ್ಸ್ಯಾಪ್ ಭಾರತದಲ್ಲಿ ಜಾರಿಗೆ ತರಲು ಬಯಸಿದೆ ಎಂದೂ ಸಚಿವಾಲಯ ಪ್ರಶ್ನಿಸಿದೆ.

ಭಾರತದಲ್ಲಿನ ತೀವ್ರ ಪ್ರತಿರೋಧವನ್ನು ಗಮನಿಸಿ ವಾಟ್ಸ್ಯಾಪ್ ತನ್ನ ಹೊಸ ಅಪ್ಡೇಟ್ ಒಪ್ಪಿಕೊಳ್ಳಲು ಈ ಹಿಂದೆ ನಿಗದಿಪಡಿಸಿದ್ದ ಫೆಬ್ರವರಿ 8ರ ಗಡುವಿನಿಂದ ಈಗಾಗಲೇ ಹಿಂದೆ ಸರಿದಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News