ಏಕಕಾಲಕ್ಕೆ ಜಿ.ಪಂ. - ಮಂಗಳೂರು ತಾಪಂ ಸಭೆ !

Update: 2021-01-19 11:43 GMT

ಮಂಗಳೂರು, ಜ.19: ದ.ಕ. ಜಿಲ್ಲೆಯ ಪ್ರಮುಖ ಸ್ಥಳೀಯಾಡಳಿತ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಂದೇ ಮಂಗಳೂರು ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯನ್ನೂ ಏಕಕಾಲದಲ್ಲಿ ಆಯೋಜಿಸುವ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಗೊಂದಲಕ್ಕೆ ಕಾರಣವಾದ ಘಟನೆ ಇಂದು ನಡೆಯಿತು.

ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆ ಇಂದು 11 ಗಂಟೆಗೆ ನಿಗದಿಯಾಗಿದ್ದರೆ ಮಂಗಳೂರು ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆ 10.30ಕ್ಕೆ ನಿಗದಿಯಾಗಿತ್ತು. ತಾಲೂಕು ಪಂಚಾಯತ್‌ನ ನೂತನ ಸಭಾಂಗಣದಲ್ಲಿ ನೂತನ ಸಭೆ ಆರಂಭವಾಗಿದ್ದು ಸುಮಾರು 11.10ರ ವೇಳೆಗೆ. ತಾಲೂಕು ಪಂಚಾಯತ್‌ನಲ್ಲಿ ಪ್ರಮುಖವಾಗಿ ಹಾಜರಿದ್ದು, ತಾಲೂಕಿನ ವಿವಿಧ ವಿಷಯಗಳ ಕುರಿತು ಚರ್ಚೆಗೆ ಉತ್ತರಿಸಬೇಕಾಗಿದ್ದ ತಹಶೀಲ್ದಾರ್‌ರವರು ಜಿಲ್ಲಾ ಪಂಚಾಯತ್ ಸಭೆಯ ಹಿನ್ನೆಲೆಯಲ್ಲಿ ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್‌ರಿಂದ ಮಾಹಿತಿಯನ್ನು ಪಡೆಯಲಾಯಿತು. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್‌ಗಳು ಭಾಗವಹಿಸುವುದು ರೂಢಿ. ಆದರೆ ಇಂದು ಒಂದೇ ದಿನ ಎರಡೂ ಸಭೆಗಳನ್ನು ನಿಗದಿಪಡಿಸಿದ ಕಾರಣ ಗೊಂದಲಕ್ಕೆ ಕಾರಣವಾಯಿತು.

ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆ ನಡೆಯಿತು.
ತೊಕ್ಕೊಟ್ಟು ಪೆರ್ಮನ್ನೂರಿನ ತಾ.ಪಂ. ಅಧೀನದ ಅಂಗಡಿ ಮಳಿಗೆಗಳು ಸೋರುತ್ತಿದ್ದು, ಇದರ ರಿಪೇರಿಗೆ ಸಂಬಂಧಿಸಿದ ಕಾರ್ಯಸೂಚಿ ಚರ್ಚೆಯ ವೇಳೆ, ದುರಸ್ತಿ ಕಾಮಗಾರಿಗೆ 5.56 ಲಕ್ಷ ರೂ. ಅಂದಾಜುಪಟ್ಟಿ ಮಾಡಿರುವುದಾಗಿ ತಾಂ. ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಸ್ವಂತ ನಿಧಿ ಇದ್ದಲ್ಲಿ ಈ ಕಾಮಗಾರಿ ನಡೆಸಬಹುದಾಗಿದ್ದು, ಕರಿಯಾ ಯೋಜನೆ ಪ್ರತ್ಯೇಕವಾಗಿ ಮಾಡಿ ಸದಸ್ಯರ ಅನುಮತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಗಂಜಿಮಠ ಗ್ರಾಪಂ ರಸ್ತೆಯ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಯಾವುದೇ ಕ್ರಮವಾಗಿಲ್ಲ. ಕಳೆದ ಹಲವು ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ದರೂ ಆಗಿಲ್ಲ ಎಂಬ ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಅಧ್ಯಕ್ಷರು ಒಂದು ತಿಂಗಳೊಳಗೆ ವ್ಯವಸ್ಥೆ ಮಾಡೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News