ಉಡುಪಿ: ಮಂಗಳವಾರ 235 ಮಂದಿಗೆ ಕೊರೋನ ಲಸಿಕೆ

Update: 2021-01-19 13:41 GMT

ಉಡುಪಿ, ಜ.19: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 235 ಮಂದಿ ಕೊರೋನಾ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಆದರೆ ಯಾರಲ್ಲೂ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ನಿಗದಿಯಾದಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಮೂರು ಕಡೆಗಳಲ್ಲಿ ತಲಾ 100ರಂತೆ ಒಟ್ಟು 300 ಮಂದಿಗೆ ಲಸಿಕೆ ನೀಡುವ ಗುರಿ ಇದ್ದರೆ, ಅಲ್ಲಿ ಇಂದು ಪಡೆದುಕೊಂಡವರು 155 ಮಂದಿ ಮಾತ್ರ. ಅದೇ ರೀತಿ ಕಾರ್ಕಳದ ತಾಲೂಕು ಆಸ್ಪತ್ರೆಯಲ್ಲೂ 100 ವೈದ್ಯರೂ ಸೇರಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿ ಇದ್ದರೂ, ಅದನ್ನು ಪಡೆದುಕೊಂಡವರು 80 ಮಂದಿ ಎಂದು ಡಾ.ಸೂಡ ತಿಳಿಸಿದರು.

ಈ ಮೂಲಕ ಜ.16ರಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಕೊರೋನ ವಿರುದ್ಧದ ಲಸಿಕೆಯನ್ನು ಪಡೆದುಕೊಂಡವರ ಒಟ್ಟು ಸಂಖ್ಯೆ 610ಕ್ಕೇರಿದೆ. ಮೊದಲ ದಿನದಲ್ಲಿ ಇಬ್ಬರಿಗೆ ಅಡ್ಡಪರಿಣಾಮ ಕಂಡುಬಂದಿದ್ದು ಬಿಟ್ಟರೆ ಉಳಿದ ಯಾರಿಂದಲೂ ಯಾವುದೇ ದೂರುಗು ಬಂದಿಲ್ಲ ಎಂದವರು ಹೇಳಿದರು.

ನಾಳೆ ಬುಧವಾರ ಮಣಿಪಾಲದ ಕೆಎಂಸಿ, ಕುಂದಾಪುರ ತಾಲೂಕು ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಒಟ್ಟು 25 ಕಡೆಗಳಲ್ಲಿ ಲಸಿಕೆ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಪ್ರತಿ ಕೇಂದ್ರದಲ್ಲಿ 100ರಂತೆ ಒಟ್ಟು 2500 ಮಂದಿಗೆ ಲಸಿಕೆ ನೀಡುವ ಸಾಧ್ಯತೆ ಇದೆ. ಆದರೆ ಅಂತಿಮ ನಿರ್ಧಾರವನ್ನು ನಾಳೆ ಬೆಳಗ್ಗೆ ತೆಗೆದು ಕೊಳ್ಳಲಾಗುವುದು ಎಂದು ಡಿಎಚ್‌ಓ ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News