“ಅಸಮತೋಲಿತ ಲಸಿಕೆ ವಿತರಣೆಯಿಂದ ಜಗತ್ತು ನೈತಿಕ ಅಧಃಪತನದತ್ತ ಸಾಗುತ್ತಿದೆ"

Update: 2021-01-19 15:06 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 19: ಕೊರೋನ ವೈರಸ್ ಲಸಿಕೆಗಳ ಅಸಮಾನ ವಿತರಣೆಯಿಂದಾಗಿ ಜಗತ್ತು ‘ವಿಪ್ಲವಕಾರಿ ನೈತಿಕ ಅರ್ಧಪತನ’ದತ್ತ ಸಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಸಿದೆ.

ಶ್ರೀಮಂತ ಮತ್ತು ಬಡ ದೇಶಗಳ ನಡುವಿನ ಅಸಮಾನತೆಯ ಗೋಡೆಯಲ್ಲಿ ಕೊರೋನ ವೈರಸ್ ಲಸಿಕೆಗಳು ಇನ್ನೊಂದು ಇಟ್ಟಿಗೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.

 ‘‘ಆರೋಗ್ಯ ಕೆಲಸಗಾರರು ಮತ್ತು ವೃದ್ಧರಿಗೆ ಮೊದಲು ಲಸಿಕೆಗಳನ್ನು ನೀಡಲು ಸರಕಾರಗಳು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ’’ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು ಹೇಳಿದರು. ‘‘ಆದರೆ, ಬಡ ದೇಶಗಳಲ್ಲಿರುವ ಆರೋಗ್ಯ ಕೆಲಸಗಾರರು ಮತ್ತು ವೃದ್ಧರಿಗೆ ಲಸಿಕೆಗಳನ್ನು ನೀಡುವ ಮೊದಲೇ ಶ್ರೀಮಂತ ದೇಶಗಳ ಯುವ ಹಾಗೂ ಆರೋಗ್ಯವಂತ ವಯಸ್ಕರಿಗೆ ನೀಡುವುದು ಸರಿಯಲ್ಲ’’ ಎಂದರು.

 ಮುಂದಿನ ತಿಂಗಳು ಲಸಿಕೆಗಳನ್ನು ಪೂರೈಸಲು ಜಾಗತಿಕ ಲಸಿಕೆ ಹಂಚಿಕಾ ಯೋಜನೆ ‘ಕೋವ್ಯಾಕ್ಸ್’ ಸಿದ್ಧತೆಗಳನ್ನು ಆರಂಭಿಸಿರುವಂತೆಯೇ, ಸಮತೋಲಿತ ಲಸಿಕೆ ಹಂಚಿಕೆಯ ಭರವಸೆಯು ದುರ್ಬಲಗೊಳ್ಳುತ್ತಿದೆ ಎಂದು ಗೇಬ್ರಿಯೇಸಸ್ ನುಡಿದರು. ‘ಕೋವ್ಯಾಕ್ಸ್’ ಎನ್ನುವುದು ಜಗತ್ತಿನ ಬಡ ದೇಶಗಳಿಗೆ ಕಡಿಮೆ ವೆಚ್ಚದಲ್ಲಿ ಕೊರೋನ ವೈರಸ್ ಲಸಿಕೆ ವಿತರಿಸಲು ವಿಶ್ವ ಆರೋಗ್ಯ ಸಂಸ್ಥೆಯು ರೂಪಿಸಿದ ಕಾರ್ಯಕ್ರಮವಾಗಿದೆ.

 ‘‘ಸಮಾನ ವಿತರಣೆಯ ಮಾತುಗಳನ್ನು ಅವರು ಆಡುತ್ತಿದ್ದಾರಾದರೂ, ಕೆಲವು ದೇಶಗಳು ಮತ್ತು ಲಸಿಕೆ ಪೂರೈಕಾ ಕಂಪೆನಿಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ ಹಾಗೂ ಕೋವ್ಯಾಕ್ಸ್ ಕಾರ್ಯಕ್ರಮದಿಂದ ದೂರ ಉಳಿದಿವೆ’’ ಎಂದು ಅವರು ನುಡಿದರು.

ಶ್ರೀಮಂತ ದೇಶಗಳಿಂದ ದ್ವಿಪಕ್ಷೀಯ ಒಪ್ಪಂದಗಳು

‘‘ಶ್ರೀಮಂತ ದೇಶಗಳ ಈ ತುರ್ತಿನಿಂದಾಗಿ ಲಸಿಕೆಗಳ ಬೆಲೆಗಳು ಹೆಚ್ಚುತ್ತಿವೆ ಹಾಗೂ ಅವುಗಳು ಸರದಿ ತಪ್ಪಿಸಿ ಲಸಿಕೆಗಳನ್ನು ಪಡೆದುಕೊಳ್ಳುತ್ತಿವೆ’’ ಎಂದರು. ‘‘ಇದು ತಪ್ಪು. ಲಸಿಕೆ ಪೂರೈಕೆಗೆ ಸಂಬಂಧಿಸಿ ಕಳೆದ ವರ್ಷ 44 ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಹಾಗೂ ಈ ವರ್ಷದಲ್ಲಿ ಈಗಾಗಲೇ ಕನಿಷ್ಠ 12 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News