ಕುಂಭಾಶಿ: ಕುಟುಂಬ ಸಮೇತ ಗಣಯಾಗದಲ್ಲಿ ಭಾಗವಹಿಸಿದ ಸಿಎಂ ಯಡಿಯೂರಪ್ಪ
ಕುಂಭಾಶಿ, ಜ.19: ಶಿವಮೊಗ್ಗದಲ್ಲಿ ತಮ್ಮ ಕುಟುಂಬದ ಆತ್ಮೀಯ ಬಾಲ್ಯ ಸ್ನೇಹಿತನ ಒತ್ತಾಸೆಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕುಂಭಾಶಿಯ ಆನೆಗುಡ್ಡೆಯ ಶ್ರೀವಿನಾಯಕ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಇಂದು ಹಮ್ಮಿಕೊಂಡಿದ್ದ 1008 ನಾರಿಕೇಳ ಗಣಯಾಗದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡರು.
ಕಳೆದೆರಡು ದಿನಗಳಿಂದ ಉಡುಪಿಯಲ್ಲಿರುವ ಮುಖ್ಯಮಂತ್ರಿ, ಮಂಗಳವಾರ ಬೆಳಗ್ಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಜಮಾಡಿಯಿಂದ ನೇರವಾಗಿ ಆನೆಗುಡ್ಡೆಗೆ ಧಾವಿಸಿದ್ದು, ಅಲ್ಲಿಗೆ ಆಗಲೇ ಬಂದಿದ್ದ ಪುತ್ರ, ಸಂಸದ ಬಿ.ವೈ. ರಾಘವೇಂದ್ರ, ಸೊಸೆ ಹಾಗೂ ಕುಟುಂಬದ ಸದಸ್ಯರ ಜೊತೆ ಸೇರಿ ಗಣಹೋಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಮೂಲತ ಕೋಟೇಶ್ವರ ಸಮೀರದ ಬೀಜಾಡಿಯ ರಾಘವೇಂದ್ರ ಉಪಾಧ್ಯಾಯರು ಶಿವಮೊಗ್ಗದಲ್ಲಿ ಹೊಟೇಲ್ ಉದ್ಯಮಿಯಾಗಿದ್ದು, ಮುಖ್ಯ ಮಂತ್ರಿಗಳ ಕುಟುಂಬದ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಯಡಿಯೂರಪ್ಪ ಮತ್ತೆ ಸಿಎಂ ಆದ ಪ್ರಯುಕ್ತ ಅವರ ಉಪಸ್ಥಿತಿಯಲ್ಲಿ ಸಹಸ್ರ ನಾರಿಕೇಳ ಗಣಯಾಗ ಮಾಡುವ ಸಂಕಲ್ಪವನ್ನು ಉಪಾಧ್ಯಾಯರು ಮಾಡಿದ್ದು, ಇದರಂತೆ ಯಡಿಯೂರಪ್ಪ ಅವರು ಸೇರಿದಂತೆ ಕುಟುಂಬದ ಉಪಸ್ಥಿತಿಯಲ್ಲಿ ದೇವಸ್ಥಾನದ ಯಾಗಶಾಲೆಯಲ್ಲಿ ಇಂದು ಗಣಹೋಮ ನಡೆಯಿತು.
ರಾಘವೇಂದ್ರ ಉಪಾಧ್ಯಾಯರು ಆನೆಗುಡ್ಡೆಯಲ್ಲಿ ಆಯೋಜಿಸಿದ ಮೂರು ಗಣಯಾಗದಲ್ಲಿ ಯಡಿಯೂರಪ್ಪ ಭಾಗವಹಿಸಿದ್ದಾರೆ. ಮುಖ್ಯಮಂತ್ರಿ ಯಾಗಿ ಮೊದಲ ಬಾರಿ ಭಾಗವಹಿಸಿದ್ದಾರೆ. ಹಿಂದೆ ಒಮ್ಮೆ ವಿರೋಧ ಪಕ್ಷದ ನಾಯಕ ರಾಗಿದ್ದಾಗಲೂ ಯಾಗದಲ್ಲಿ ಪಾಲ್ಗೊಂಡಿದ್ದರು. ಯಡಿಯೂರಪ್ಪ ಶಿರಾಳಿಕೊಪ್ಪ ದಲ್ಲಿದ್ದ ದಿನದಿಂದಲೂ ಅವರು ಆತ್ಮೀಯರು ಎಂದು ಉಪಾಧ್ಯಾಯರ ಸಹೋದರ ಜೆ.ಪಿ.ರಾಮಚಂದ್ರ ರಾವ್ ತಿಳಿಸಿದರು.
ಗಣಹೋಮ ಹಾಗೂ ನಂತರದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಬಳಿಕ ದೇವಸ್ಥಾನದಲ್ಲೇ ಭೋಜನದ ರೂಪದಲ್ಲಿ ಪ್ರಸಾದವನ್ನು ಸ್ವೀಕರಿ ಸಿದ ಯಡಿಯೂರಪ್ಪ ಅಲ್ಲಿಂದ ಕೋಟೇಶ್ವರ ಯುವಮೆರಿಡಿಯನ್‌ನ ಹೆಲಿಪ್ಯಾಡ್‌ಗೆ ಬಂದು ಹೆಲಿಕಾಫ್ಟರ್ ಮೂಲಕ ಬೆಂಗಳೂರಿಗೆ ತೆರಳಿದರು. ಭೇಟಿಯ ವೇಳೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಉಪಸ್ಥಿತರಿದ್ದರು.
ಭಕ್ತರಿಗೆ ತೊಂದರೆ: ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಕುಂಭಾಶಿಯಲ್ಲಿ ಬಿಗು ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 150ಕ್ಕೂ ಅಧಿಕ ಮಂದಿ ಇಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು. ಮುಖ್ಯಮಂತ್ರಿಗಳು ದೇವಸ್ಥಾನ ದಲ್ಲಿದ್ದಷ್ಟು ಹೊತ್ತು ಸಾಮಾನ್ಯ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಎರಡು ಗಂಟೆಗಳಿಗೂ ಅಧಿಕ ಕಾಲ ವಿನಾಯಕನ ದರ್ಶನಕ್ಕೆ ಬಂದಿದ್ದ ಭಕ್ತರು ಅವಕಾಶ ಸಿಗದೇ, ಭೋಜನಕ್ಕೂ ಅವಕಾಶವಿಲ್ಲದೆ ದೇವಾಲಯದ ಆವರಣದ ಹೊರಗೆ ಪರದಾಡುವಂತಾಯಿತು.