ಬಡವರ ಸೇವೆಯೇ ಎಸ್‌ಡಿಪಿಐ ಉದ್ದೇಶ: ಅಬ್ದುಲ್ ಹನ್ನಾನ್

Update: 2021-01-19 16:26 GMT

ಉಡುಪಿ, ಜ.19: ಎಸ್‌ಡಿಪಿಐ ಪಕ್ಷದ ಸ್ಥಾಪನೆಯ ಉದ್ದೇಶವೇ ಬಡವರ ಸೇವೆ, ದೇಶದ ಕಟ್ಟಕಡೆಯ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಸರಕಾರದ ಸೌಲಭ್ಯ ಒದಗಿಸುವುದಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ಜ.18ರಂದು ಆಯೋಜಿಸಲಾದ ಎಸ್‌ಡಿ ಪಿಐ ಪಕ್ಷ ಬೆಂಬಲಿತ ಗ್ರಾಮ ಪಂಚಾಯತ್ ವಿಜೇತ ಅಭ್ಯರ್ಥಿಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಭ್ರಷ್ಟಾಚಾರಮುಕ್ತ ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ಸ್ಥಾಪಿಸಲು ದೊಡ್ಡಮಟ್ಟದ ತ್ಯಾಗ ಪರಿಶ್ರಮ ಜನಪ್ರತಿನಿಧಿಗಳು ಮಾಡಬೇಕು. ಶಿಕ್ಷಿತ ಮತ್ತು ಕೆಲವು ಮಾಧ್ಯಮ ವರ್ಗಗಳಿಗೆ ಮಾತ್ರ ಸರಕಾರಿ ಸವಲತ್ತು ಸಿಗುತ್ತಿದೆ. ಇಂತಹ ಸವಲತ್ತುಗಳನ್ನು ಕಡು ಬಡವ, ಗ್ರಾಮ ವಾಸಿ ಹಾಗೂ ಅನಕ್ಷರಸ್ತ ಕುಟುಂಬಗಳನ್ನು ತಲುಪಿಸುವ ಪ್ರಯತ್ನಗಳನ್ನು ಎಸ್.ಡಿ.ಪಿ.ಐ ಚುನಾಯಿತ ಜನಪ್ರತಿನಿಧಿಗಳು ನಿರಂತರವಾಗಿ ಮಾಡಬೇಕು. ಇದರಲ್ಲಿ ಧರ್ಮ ಹಾಗೂ ಪಕ್ಷಗಳ ತಾರತಮ್ಯ ಮಾಡಬಾರದು ಎಂದರು.

ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಅಕ್ರಮ ಹಾಸನ್ ಮಾತನಾಡಿ, ಶೀಘ್ರವೇ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಡೆಯಲಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡಿ ಜನಸಂಪರ್ಕ ಕಾರ್ಯಕ್ರಮ ನಡೆಯಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಿಂದ ಒಂದೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಲ್ಯಾಸ್ ಸಾಸ್ತಾನ್, ಜಿಲ್ಲಾ ಉಪಾಧ್ಯಕ್ಷ ಸಾದಿಕ್ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಉಚ್ಚಿಲ, ಉಡುಪಿ, ಕಾಪು, ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News