ಕೇರಳ: ಅಪ್ರಾಪ್ತ ಬಾಲಕಿಯ ಮೇಲೆ ಹಲವು ತಿಂಗಳು ಅತ್ಯಾಚಾರ

Update: 2021-01-19 17:05 GMT

ಮಲಪ್ಪುರಂ, ಜ. 19: ಹದಿನೇಳು ವರ್ಷದ ಬಾಲಕಿಯ ಮೇಲೆ 38 ಮಂದಿ ಕಳೆದ ಹಲವು ತಿಂಗಳಿಂದ ನಿರಂತರ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಎಸಗಿರುವುದು ಮಲಪ್ಪುರದಿಂದ ವರದಿಯಾಗಿದೆ. ಘಟನೆಗೆ ಸಂಬಂಧಿಸಿ 44 ಮಂದಿಯ ವಿರುದ್ಧ 32 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 20 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಹಲವು ತಿಂಗಳಿಂದ ಬಾಲಕಿ ಮೇಲೆ ನಡೆದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಮೂರು ಅತ್ಯಾಚಾರ ಪ್ರಕರಣ ಸೇರಿದಂತೆ 32 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಲಪ್ಪುರ ಪೊಲೀಸರು ತಿಳಿಸಿದ್ದಾರೆ.

ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್‌ನಲ್ಲಿ ಕಳೆದ 5 ವರ್ಷಗಳಿಂದ ಈ ಘಟನೆಗಳು ವರದಿಯಾಗಿವೆ. ಪಾಂಡಿಕ್ಕಾಡ್ ವಲಯದಲ್ಲಿರುವ ಪುಟ್ಟ ಕಾಲನಿಯಲ್ಲಿ ಬಾಲಕಿ ತಾಯಿಯೊಂದಿಗೆ ಜೀವಿಸುತ್ತಿದ್ದಳು. 2015ರಲ್ಲಿ ತಾಯಿಯ ದೂರಿನ ಆಧಾರದಲ್ಲಿ ಸ್ಥಳೀಯ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.

ಬಾಲಕಿ ತನ್ನ ಗೆಳೆಯನೊಂದಿಗೆ ತೆರಳಿರುವುದಾಗಿ ಕುಟುಂಬ ಆರೋಪಿಸಿತ್ತು. ತಾಯಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಆಗ ಎರಡು ಪೋಕ್ಸೋ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕುಟುಂಬದ ದೂರಿನ ಆಧಾರದಲ್ಲಿ 2017ರಲ್ಲಿ ಕೂಡ ಇದೇ ರೀತಿಯ ಪ್ರಕರಣ ದಾಖಲಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳನ್ನು ಪೋಕ್ಸೊ ಅಡಿಯಲ್ಲಿ ಬಂಧಿಸಲಾಗಿತ್ತು ಹಾಗೂ ಈ ಪ್ರಕರಣದ ವಿಚಾರಣೆ ಜಿಲ್ಲೆಯ ವಿವಿಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

 ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಕೆಯ ಕುಟುಂಬ ಮತ್ತೆ ನಾಪತ್ತೆ ದೂರು ದಾಖಲಿಸಿತ್ತು. ಬಾಲಕಿ ತನ್ನ ಗೆಳೆಯ ಬೈಕ್‌ನಲ್ಲಿ ತೆರಳಿದ್ದಾಳೆ ಎಂದು ಕುಟುಂಬ ದೂರಿನಲ್ಲಿ ಹೇಳಿತ್ತು. ಬಾಲಕಿಯನ್ನು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಹೇಳಿಕೆಯಲ್ಲಿ ಬಾಲಕಿ 2 ಲೈಂಗಿಕ ಹಲ್ಲೆ ಸೇರಿದಂತೆ 15 ಕಿರುಕುಳದ ಘಟನೆಗಳನ್ನು ಉಲ್ಲೇಖಿಸಿದ್ದಳು. ತರುವಾಯ ಬಾಲಕಿಯನ್ನು ಆಶ್ರಯ ಧಾಮಕ್ಕೆ ಕಳುಹಿಸಲಾಯಿತು. ತಿಂಗಳ ನಂತರ ಬಾಲಕಿಯ ಇನ್ನೊಂದು ಹೇಳಿಕೆ ದಾಖಲಿಸಲಾಗಿತ್ತು. ಈ ಸಂದರ್ಭ ಬಾಲಕಿ 12ಕ್ಕೂ ಅಧಿಕ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಘಟನೆಗಳನ್ನು ಉಲ್ಲೇಖಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News