ರಕ್ತದಾನದಿಂದ ಹೃದಯಕ್ಕೆ ರಕ್ಷಣೆ, ರೋಗನಿರೋಧಕ ಶಕ್ತಿ ಹೆಚ್ಚಳ: ಡಾ. ಶರತ್ ಕುಮಾರ್

Update: 2021-01-19 17:06 GMT

ಮಂಗಳೂರು, ಜ.19: ರಕ್ತದಾನವು ದೇಹದ ಅನಗತ್ಯ ಕೊಲೆಸ್ಟ್ರಾಲ್ ಹೊರಗೆ ಹಾಕುತ್ತದೆ ಮತ್ತು ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ. ರಕ್ತದಾನದಿಂದ ಹೃದಯಕ್ಕೂ ಒಳ್ಳೆಯದು, ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಲಿದೆ ಎಂದು ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯ ಮತ್ತು ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಶರತ್ ಕುಮಾರ್ ರಾವ್ ಜೆ. ಹೇಳಿದರು.

ಮಂಗಳೂರು ವಿವಿಯ ಎನ್ನೆಸ್ಸೆಸ್ ವಿಭಾಗ, ವಿವಿ ಕಾಲೇಜಿನ ಎನ್‌ಸಿಸಿ ವಿಭಾಗಗಳು ಹಾಗೂ ಲಯನ್ಸ್ ಕ್ಲಬ್ ಹೈಲ್ಯಾಂಡ್ ಸಹಯೋಗ ದೊಂದಿಗೆ ಮಂಗಳವಾರ ನಗರದ ರವೀಂದ್ರ ಕಲಾಭವನದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬರ ರಕ್ತ ನಾಲ್ವರ ಜೀವ ಉಳಿಸಬಹುದು. ಅದರಲ್ಲೂ ನಿಯಮಿತ ರಕ್ತಪೂರಣದ ಅಗತ್ಯರುವ ತಲಸ್ಸೇಮಿಯಾದಂತಹ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ರಕ್ತದ ತೀವ್ರ ಅಗತ್ಯತೆಯಿರುತ್ತದೆ ಎಂದರು.

ಸುಮಾರು 217 ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ಲಯನ್ಸ್ ಕ್ಲಬ್‌ನ ಪ್ರಾದೇಶಿಕ ಸಲಹೆಗಾರ ನಾಗೇಶ್ ಕುಮಾರ್, ಪ್ರಾಂಶುಪಾಲ ಡಾ. ಎ. ಹರೀಶ್ ಮಾತನಾಡಿದರು. ಎನ್‌ಸಿಸಿ (ನೌಕಾದಳ) ಅಧಿಕಾರಿ ಡಾ. ಯತೀಶ್ ಕುಮಾರ್, ಎನ್ನೆಸ್ಸೆಸ್ ಅಧಿಕಾರಿಗಳಾದ ಡಾ. ಗಾಯತ್ರಿ, ಡಾ. ಸುರೇಶ್, ಕಾಲೇಜಿನ ಯುವ ರೆಡ್‌ಕ್ರಾಸ್ ಸಂಯೋಜಕ ಡಾ. ಕುಮಾರಸ್ವಾಮಿ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ (ಹೈಲ್ಯಾಂಡ್) ಅಧ್ಯಕ್ಷ ಕೆ.ಎಸ್. ರಂಜನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News