ಅಸ್ಸಾಂ: 1,000 ಡೋಸ್ ಕೋವಿಡ್ ಲಸಿಕೆ ಹೆಪ್ಪುಗಟ್ಟಿ ವ್ಯರ್ಥ

Update: 2021-01-20 04:00 GMT

ಗುವಾಹತಿ, ಜ.20: ಅಸ್ಸಾಂನ ಕಚಾರ್ ಜಿಲ್ಲೆಯ ಸಿಲ್ಚೇರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ 1000 ಡೋಸ್ ಕೋವಿಡ್-19 ಲಸಿಕೆ ಹೆಪ್ಪುಗಟ್ಟಿ ವ್ಯರ್ಥವಾದ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಆರೋಗ್ಯ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಕೇಳಿದೆ.

ಜನವರಿ 16ರಂದು ದೇಶಾದ್ಯಂತ ಆರಂಭವಾದ ಕೋವಿಡ್ ಲಸಿಕೆ ಕಾರ್ಯಕ್ರಮದಂತೆ ದಕ್ಷಿಣ ಅಸ್ಸಾಂನ ಈ ಜಿಲ್ಲೆಗೆ ದಿನಕ್ಕೆ 98 ಡೋಸ್ ಲಸಿಕೆ ಅಗತ್ಯವಿದ್ದು, 1,000 ಡೋಸ್‌ಗಳು ಇಲ್ಲಿಗೆ ಸರಬರಾಜಾಗಿದ್ದವು. ಆದರೆ ಇದು ಆಸ್ಪತ್ರೆಯಲ್ಲಿ ಸಂಗ್ರಹಿಸಿದ ಒಂದು ಗಂಟೆಯ ಒಳಗಾಗಿ ಹೆಪ್ಪುಗಟ್ಟಿತು ಎನ್ನಲಾಗಿದೆ.

ಈ ಲಸಿಕೆಯನ್ನು ಗುವಾಹತಿಯಿಂದ ಒಯ್ಯಲಾಗಿದ್ದು, ನಿಗದಿಪಡಿಸಿದ ತಾಪಮಾನ ಮಟ್ಟಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಇದನ್ನು ಸಂಗ್ರಹಿಸಿ ಇಡಲಾಗಿತ್ತು ಎಂದು ಆಪಾದಿಸಲಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲು ನಿರಾಕರಿಸಿರುವ ಕೆಲ ಅಧಿಕಾರಿಗಳು, ಶೀತಲೀಕರಣ ವ್ಯವಸ್ಥೆ ಒದಗಿಸಿದವರ ತಪ್ಪಿನಿಂದ ಇದು ಸಂಭವಿಸಿದೆ ಎಂದು ಅನಧಿಕೃತವಾಗಿ ಹೇಳಿದ್ದಾರೆ.

ಆರೋಗ್ಯ ಇಲಾಖೆ ಈ ಘಟನೆಯನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ. "ಇಲಾಖೆ ಈ ಬಗ್ಗೆ ವಿಚಾರಣೆ ಆರಂಭಿಸುತ್ತಿದೆ" ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

"ಸಾಮಾನ್ಯವಾಗಿ ನಿರ್ವಹಣೆ, ಸಾಗಣೆ, ದಾಸ್ತಾನು ಮಾಡುವ ಸಂದರ್ಭದಲ್ಲಿ ಒಂದಷ್ಟು ಪ್ರಮಾಣದ ಲಸಿಕೆ ವ್ಯರ್ಥವಾಗುತ್ತದೆ. ವ್ಯರ್ಥವಾದ ಲಸಿಕೆಯನ್ನು ಪಕ್ಕಕ್ಕೆ ಇಡುವಂತೆ ಸೂಚಿಸಿದ್ದೇವೆ ಹಾಗೂ ಶಿಷ್ಟಾಚಾರಕ್ಕೆ ಅನುಗುಣವಾಗಿ ಅದರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು" ಎಂದು ಅಧಿಕಾರಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News