ನೊಬೆಲ್ ಶಾಂತಿ ಪ್ರಶಸ್ತಿಗೆ ಖಾಲ್ಸಾ ಏಡ್ ನಾಮಕರಣ: ವಿಚಾರಣೆಗೆ ಕರೆದಿದ್ದ ಎನ್ಐಎ ಗೆ ಮುಜುಗರ

Update: 2021-01-20 05:23 GMT

ಹೊಸದಿಲ್ಲಿ: ಸಮಾಜ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಂಗ್ಲೆಂಡ್ ಮೂಲದ ಎನ್‍ಜಿಒ ಖಾಲ್ಸಾ ಏಡ್ ಅನ್ನು ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಳಿಸಿದ ಬೆನ್ನಿಗೇ ರಾಷ್ಟ್ರೀಯ ತನಿಖಾ ಏಜನ್ಸಿ ಈ ಸಂಸ್ಥೆಯ ಪ್ರಮುಖರ ಪ್ರಸ್ತಾವಿತ ವಿಚಾರಣೆಯನ್ನು ಮುಂದೂಡಿದೆ ಎನ್ನಲಾಗಿದೆ. ಜನವರಿಯ 16ರಂದು ಎನ್‍ಐಎ ಖಾಲ್ಸಾ ಏಡ್ ಸಂಸ್ಥೆಯ ನಿರ್ದೇಶಕ ಅಮನ್‍ಪ್ರೀತ್ ಸಿಂಗ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕ್ರಿಯೆಯಿಂದ ಸದ್ಯ ಎನ್‌ಐಎಗೆ ಭಾರೀ ಮುಜುಗರವಾದಂತಾಗಿದೆ.

ಬ್ರಿಟಿಷ್ ಸಿಖ್ ಸಾಮಾಜಿಕ ಹೋರಾಟಗಾರ ರವಿ ಸಿಂಗ್ ಅವರು 1999ರಲ್ಲಿ ಸ್ಥಾಪಿಸಿದ ಈ ಸಂಘಟನೆಯ ಶಾಖೆಗಳು ಭಾರತ ಸಹಿತ ವಿವಿಧ ದೇಶಗಳಲ್ಲಿದ್ದು 2018ರ ಕೇರಳ ನೆರೆ ನಂತರ ಸಾಕಷ್ಟು ಪುನರ್ವಸತಿ ಕಾರ್ಯದಲ್ಲಿ ಅದು ತನ್ನನ್ನು ತೊಡಗಿಸಿಕೊಂಡಿತ್ತು. ಇದೀಗ ದಿಲ್ಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಸ್ಥಳಗಳಲ್ಲೂ ತನ್ನ ಸೇವಾ ಕಾರ್ಯ ವಿಸ್ತರಿಸಿರುವ ಸಂಘಟನೆ ರೈತರಿಗೆ ಆಹಾರ, ನೀರು, ಶೌಚಾಲಯ ವ್ಯವಸ್ಥೆ ಹಾಗೂ ಇಲೆಕ್ಟ್ರಿಕ್ ಫುಟ್ ಮಸಾಜರ್ ಸೌಲಭ್ಯವನ್ನೂ ಒದಗಿಸಿ ಗಮನ ಸೆಳೆದಿದೆ.

ಜನವರಿ 16ರಂದು ಎನ್‍ಐಎ ಖಾಲ್ಸಾ ಏಡ್ ನಿರ್ದೇಶಕರು ಹಾಗೂ ಇನ್ನೊಬ್ಬರಿಗೆ ಸಮನ್ಸ್ ಜಾರಿಗೊಳಿಸಿದ್ದರೆ ಜನವರಿ 18ರಂದು ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಕುರಿತು ಮಾಹಿತಿ ಲಭ್ಯವಾಗಿತ್ತು. ಸೋಮವಾರ ಮತ್ತು ಮಂಗಳವಾರ ಎನ್‍ಐಎ ಸಮನ್ಸ್ ಅನ್ವಯ ಖಾಲ್ಸಾ ಏಡ್ ನಿರ್ದೇಶಕ ಹಾಗೂ ಇನ್ನೊಬ್ಬರು ಹಾಜರಿರಬೇಕಿದ್ದರೂ ಈ ವಿಚಾರಣೆಯನ್ನು ಎನ್‍ಐಎ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News