ಜೋ ಬೈಡನ್ ಭಾಷಣದ ಬರಹಗಾರರಾಗಿ ಭಾರತ ಮೂಲದ ವಿನಯ್ ರೆಡ್ಡಿ ನೇಮಕ

Update: 2021-01-20 05:29 GMT

ವಾಶಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜ.20ರಂದು ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಜೋ ಬೈಡನ್ ಅವರು ದೇಶವನ್ನುದ್ದೇಶಿಸಿ ಚೊಚ್ಚಲ ಭಾಷಣ ಮಾಡಲಿದ್ದಾರೆ. ಏಕತೆಯ ವಿಷಯದ ಕುರಿತಂತೆಯೇ ಬೈಡನ್ ಭಾಷಣ ಮಾಡಲಿದ್ದಾರೆ ಎಂದು ಅಧ್ಯಕ್ಷರಾಗಿ ಚುನಾಯಿತರಾದ ಬೈಡನ್‍ಗೆ ಆತ್ಮೀಯರಾಗಿರುವ ಸಲಹೆಗಾರರೊಬ್ಬರು ತಿಳಿಸಿದ್ದಾರೆ.

ಬೈಡನ್ ಭಾಷಣವು 20 ರಿಂದ 30 ನಿಮಿಷಗಳ ತನಕ ಇರುತ್ತದೆ. ಏಕತೆಯೇ ಭಾಷಣದ ವಿಷಯವಾಗಿರುತ್ತದೆ. ವಿಶೇಷವೆಂದರೆ ಬೈಡನ್ ಅವರ ಭಾಷಣವನ್ನು ಬರೆದುಕೊಡುವವರು ಭಾರತೀಯ-ಅಮೆರಿಕನ್ ವಿನಯ್ ರೆಡ್ಡಿ.

ಓಹಿಯೋದ ಡೇಟನ್ ನಲ್ಲಿ ಬೆಳೆದ ರೆಡ್ಡಿ, 2013ರಿಂದ 2017ರ ವರೆಗೆ ಬೈಡನ್ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಬೈಡನ್ ಅವರ ಮುಖ್ಯ ಭಾಷಣ ಬರಹಗಾರರಾಗಿದ್ದರು. ಇದೀಗ ಅಧ್ಯಕ್ಷರ ಭಾಷಣ ಬರಹಗಾರರಾಗಿ ನೇಮಕಗೊಂಡ ಮೊತ್ತ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೈಡನ್ ಅವರು ವೆಸ್ಟ್ ಫ್ರಂಟ್ ಆಫ್ ಕ್ಯಾಪಿಟೋಲ್ ನಲ್ಲಿ ಮಧ್ಯಾಹ್ನ 12 ಗಂಟೆಗೆ(ಸ್ಥಳೀಯ ಸಮಯ) ಸರಿಯಾಗಿ ಮುಖ್ಯ ನ್ಯಾಯಮೂರ್ತಿ ಜಾನ್ ರಾಬಟ್ಸ್ ಅವರಿಂದ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೈಡನ್ ಅವರು ಕಂಡುಕೇಳರಿಯದ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವನ್ನು ಒಗ್ಗೂಡಿಸುವ ಅಗತ್ಯದ ಕುರಿತು ಮಾತನಾಡಲಿದ್ದಾರೆ.  ಎಲ್ಲ ಅಮೆರಿಕರನ್ನು ತಲುಪುವ ಪ್ರಯತ್ನ ಮಾಡಲಿದ್ದಾರೆ. ಪ್ರತಿ ನಾಗರಿಕರು ಕೂಡ ಅಮೆರಿಕನ್ನರು ಎದುರಿಸುತ್ತಿರುವ ಅಸಾಧಾರಣ ಸವಾಲು ಎದುರಿಸುವ ಭಾಗವಾಗಬೇಕೆಂದು ಕರೆ ನೀಡುತ್ತಾರೆ ಎಂದು ಬೈಡನ್ ಸಲಹೆಗಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News