ಉಳ್ಳಾಲ: ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಬರಹಗಳುಳ್ಳ ಭಿತ್ತಿಪತ್ರ ಪತ್ತೆ

Update: 2021-01-20 05:50 GMT

ಉಳ್ಳಾಲ, ಜ.20: ಉಳ್ಳಾಲ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಕಿಡಿಗೇಡಿಗಳಿಗೆ ಮುಖ್ಯಮಂತ್ರಿ ಸಹಿತ ಬಿಜೆಪಿ ನಾಯಕರ ಭಾವಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹಗಳಿದ್ದ ಭಿತ್ತಿಪತ್ರಗಳನ್ನು ಹಾಕಿ ವಿಕೃತಿ ಮೆರೆದಿರುವುದು ಕಂಡುಬಂದಿದೆ.

ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಭಾವಚಿತ್ರಕ್ಕೆ ಶಿಲುಬೆಯಾಕೃತಿ ಚಿತ್ರ ಬಿಡಿಸಿ ಕಾಣಿಕೆ ಹುಂಡಿಯೊಳಗೆ ಹಾಕಲಾಗಿದೆ. ಅಲ್ಲದೆ ಕಾಂಡಮ್ ಗಳು ಕೂಡಾ ಕಂಡುಬಂದಿದೆ.

ಉಳ್ಳಾಲದ ಕೊರಗಜ್ಜ ಸೇವಾ ಸಮಿತಿಯವರು ಪ್ರತೀ ತಿಂಗಳ ಸಂಕ್ರಾತಿಯಂದು ಕಾಣಿಕೆ ಡಬ್ಬಿಯಿಂದ ಹಣ ತೆಗೆಯುವುದು ವಾಡಿಕೆ. ಈ ಬಾರಿ ಸ್ವಲ್ಪ ತಡವಾಗಿ ಜ.19ರಂದು  ಸಂಜೆ ಕಾಣಿಕೆ‌ ಡಬ್ಬಿ ತೆರೆದಾಗ ಈ ವಿಕೃತಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆ.ಆರ್.ಐ.ಡಿ.ಎಲ್. ನಿಗಮ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಶುಭಕೋರಿದ ಬ್ಯಾನರ್ ಕಾಣಿಕೆ ಡಬ್ಬಿಯಲ್ಲಿ ಕಂಡುಬಂದಿದ್ದು, ಅದರಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲು ಸೇರಿದಂತೆ ಅನೇಕ ಬಿಜೆಪಿ ನಾಯಕರ ಭಾವ ಚಿತ್ರಗಳನ್ನು ಗೀಚಿ ಕುರೂಪಗೊಳಿಸಲಾಗಿದೆ. ಬಿ.ಎಸ್.ವೈ ಮತ್ತು ಅವರ ಪುತ್ರ ವಿಜಯೇಂದ್ರ ಫೋಟೊದ ಕತ್ತಲ್ಲಿ ಶಿಲುಬೆಯ ಹಾರದ ಚಿತ್ರ ಬಿಡಿಸಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು..! 

ಕಾಣಿಕೆ ಡಬ್ಬದಲ್ಲಿ ಕಾಣಿಸಿಕೊಂಡ ಬ್ಯಾನರ್ ನಲ್ಲಿ ರಾಜಕಾರಣಿಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದೆ.

ದೇವಲೋಕದಿಂದ ಹೊರಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರನ್ನಾಗಿಸಿ ನಕಲಿ ದೇವರಾಗಿ ಅನಾದಿ ಕಾಲದಿಂದ ಮೆರೆಯಲ್ಪಡುತ್ತಿವೆ, ಎಚ್ಚರ.

ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ ,ಬಾಚಿ ತಿಂದು ತೇಗುವ ಈ ಹಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆದು , ಹಿಡಿದು ಕೊಲ್ಲ ಬೇಕಾಗಿದೆ. ಜನರು ಸಿದ್ಧರಾಗಬೇಕು ಎಂದು ಆ ಬ್ಯಾನರ್ ನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕೊರಗಜ್ಜ ಸೇವಾ ಸಮಿತಿಯವರು ಹಾಗೂ ಅರ್ಚಕ ಸುನೀಲ್ ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News