ಉಳ್ಳಾಲ ದೈವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಅವಹೇಳನಕಾರಿ ಬರಹ ಪ್ರಕರಣ: ಕಮಿಷನರ್ ರಿಂದ ಪರಿಶೀಲನೆ

Update: 2021-01-20 10:15 GMT

ಉಳ್ಳಾಲ, ಜ.20: ಕಿಡಿಗೇಡಿಗಳು ವಿಕೃತಿ ಮೆರೆದ ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆ ಮತ್ತು ಕೊಣಾಜೆ ಮುಲಾರದ ಗೋಪಾಲಕೃಷ್ಣ ಭಜನಾ ಮಂದಿರಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. 

ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆಯ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಮತ್ತು ಉದ್ರೇಕಿತ ಬರಹವುಳ್ಳ ಭಿತ್ತಿ ಪತ್ರವೊಂದನ್ನು ಹಾಕಿದ್ದು ನಿನ್ನೆ ರಾತ್ರಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಬೆಳಗ್ಗೆ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ನೀಡುವಂತೆ ಕೊರಗಜ್ಜ, ಗುಳಿಗಜ್ಜ ಸನ್ನಿಧಿಯಲ್ಲಿ ಸಮಿತಿ ವತಿಯಿಂದ ಸಾಮೂಹಿಕ ಪ್ರಾರ್ಥನೆಯೂ ನಡೆದಿತ್ತು. ಇದೇ ವೇಳೆ ಕಿಡಿಗೇಡಿ ಕೃತ್ಯ ಹಿನ್ನೆಲೆಯಲ್ಲಿ ಕಮಿಷನರ್ ಶಶಿಕುಮಾರ್ ಉಳ್ಳಾಲಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. 

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಯಾರದ್ದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸ ಸಲ್ಲದು. ಈ ಹಿಂದೆಯೂ ನಗರದಲ್ಲಿ ಈ ರೀತಿಯ ಎರಡು ಪ್ರಕರಣ ನಡೆದಿದೆ.  ಕೊಣಾಜೆಯಲ್ಲೂ ಇದೇ ರೀತಿ ಘಟನೆ ನಡೆದಿದ್ದು ಡಿಸಿಪಿ ಹರಿರಾಂ ಶಂಕರ್ ಮತ್ತು ಎಸಿಪಿ ರಂಜಿತ್ ಬಂಡಾರು ನೇತೃತ್ವದ ವಿಶೇಷ ತಂಡ ಆದಷ್ಟು ಬೇಗನೆ ಕಿಡಿಗೇಡಿಗಳ ಪತ್ತೆ ಹಚ್ಚುವ ಕಾರ್ಯ ನಡೆಸುತ್ತದೆ. ಧಾರ್ಮಿಕ ಕ್ಷೇತ್ರದವರು ಎಲ್ಲರೂ ಸಿಸಿಟಿವಿ ಅಳವಡಿಸಲು ಸಲಹೆ ನೀಡಿದರು.

ಉಳ್ಳಾಲ ನಗರಸಭೆ ಕಟ್ಟಡದಲ್ಲೇ ಸಿಸಿಟಿವಿ ಕ್ಯಾಮರಾ ಇಲ್ಲ ! 

ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮರಾ ಯಾಕೆ ಹಾಕಿಲ್ಲ ಎಂದು ಕಮಿಷನರ್ ಶಶಿಕುಮಾರ್ ಅವರು ಸಮಿತಿ‌ ಅಧ್ಯಕ್ಷ ಸುನೀಲ್ ಅವರಲ್ಲಿ ಕೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕೊರಗಜ್ಜನ ಕಟ್ಟೆಯ ಎದುರಲ್ಲೇ ಇರುವ ನಗರಸಭೆಯ ಬೃಹತ್ ಸರಕಾರಿ ಕಟ್ಟಡದಲ್ಲೇ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ ಎಂದು ಗಮನಕ್ಕೆ ತಂದರು.

ನಗರಸಭೆಯ ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮರಾ ಇರುತ್ತಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದರು.

ಈ ವೇಳೆ ಬಿಜೆಪಿ ಕ್ಷೇತ್ರ ಸಮಿತಿಯಿಂದಲೂ ಕಮೀಷನರ್ ಅವರಿಗೆ ದೂರು ನೀಡಲಾಯಿತು. ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್ ಹಾಕಿದ್ದಲ್ಲದೆ, ಭಿತ್ತಿ ಪತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿ ಅನೇಕ ಬಿಜೆಪಿ ಮುಖಂಡರ ಅವಹೇಳನ ಮಾಡಲಾಗಿದ್ದು, ಇದರಿಂದ ಸಾಮಾಜಿಕ ನೆಮ್ಮದಿ ಕೆಡುವ ಸಾಧ್ಯತೆ ಇದೆ. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ಚಂದ್ರಹಾಸ್ ಪಂಡಿತ್ ಹೌಸ್ ಅವರು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News