ಜ.24-28: ಅಜಿಲಮೊಗರು ಮಾಲಿದಾ ಉರೂಸ್

Update: 2021-01-20 10:30 GMT

ಮಂಗಳೂರು, ಜ.20: ದಕ್ಷಿಣ ಭಾರತದ ಪ್ರಮುಖ ಸರ್ವಧರ್ಮೀಯರು ಪಾಲ್ಗೊಳ್ಳುವ ಅಜಿಲಮೊಗರು ಮಾಲಿದಾ ಉರೂಸ್ ಜ.24ರಿಂದ 28ರವರೆಗೆ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಹಾಜಿ ಪಿ.ಬಿ.ಅಬ್ದುಲ್ ಹಮೀದ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಜಿಲಮೊಗರು ಜುಮಾ ಮಸೀದಿಯ ಸಂಸ್ಥಾಪಕ ಹಾಗೂ ಪವಾಡ ಪುರುಷರಾದ ಹಝ್ರತ್ ಸೈಯದ್ ಬಾಬಾ ಫಕ್ರುದ್ದೀನ್ ವಲಿಯುಲ್ಲಾಹಿಯವರ ಸ್ಮರಣಾರ್ಥ ವರ್ಷಂಪ್ರತಿ ನಡೆಸಲಾಗುವ 748ನೆ ಮಾಲಿದಾ ಉರೂಸ್ ಇದಾಗಿದೆ ಎಂದು ಹೇಳಿದರು.

ಜ.24ರಂದು ಮಗ್ರಿಬ್ ನಮಾಝ್ ಬಳಿಕ ಅಸ್ಸೈಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದೆ ಎಂದರು.

ಜ.25ರಂದು ಮಗ್ರಿಬ್ ನಮಾಝ್ ಬಳಿಕ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಹಾಗೂ ಪೆರೋಡ್ ಮುಹಮ್ಮದ್ ಅಝ್‌ಹರಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಜ.26ರಂದು ಭಂಡಾರದ ಹರಕೆ ಹಾಗೂ ಬುರ್ದಾ ಮಜ್ಲಿಸ್ ನಡೆಯಲಿದೆ. ಅಸ್ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಜ.27ರಂದು ಊರ-ಪರವೂರ ಮಹನೀಯರ ಕೂಡುವಿಕೆಯಿಂದ ಮಾಲಿದಾ ಹರಕೆ ಆರಂಭವಾಗಲಿದ್ದು, ಮಗ್ರಿಬ್ ನಮಾಝ್ ಬಳಿಕ ಖ್ಯಾತ ಭಾಷಣಕಾರ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಮತ ಪ್ರಭಾಷಣ ಮಾಡಲಿದ್ದಾರೆ.

ಸಮಾರೋಪ ಸಮಾರಂಭ ಜ.28ರಂದು ನಡೆಯಲಿದೆ. ಹಗಲು ಸಾಮೂಹಿಕ ಪ್ರಾರ್ಥನೆ, ಮಗ್ರಿಬ್ ನಮಾಝ್ ಬಳಿಕ ಅಜಿಲಮೊಗರು ಮುದರ್ರಿಸ್ ಪಿ.ಎಸ್.ತ್ವಾಹ ಸಅದಿ ಅಲ್ -ಅಫ್ಳಲಿ ಭಾಷಣ ಮಾಡಲಿದ್ದಾರೆ. ರಾತ್ರಿ 11ರಿಂದ 1 ಗಂಟೆಯ ತನಕೆಗೆ ಕಂದೂರಿ ಊಟ ವಿತರಿಸಲಾಗುವುದು. ಊರೂಸ್‌ನ ಐದು ದಿನಗಳಲ್ಲಿ ಪ್ರಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಝಿಯಾರತ್, ಸಾಮೂಹಿಕ ಪ್ರಾರ್ಥನೆ ಹಾಗೂ ಬುರ್ದಾ ಮಜ್ಲಿಸ್ ನಡೆಯಲಿದೆ. ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಸ್ತ್ರೀಯರಿಗೆ ಉರೂಸಿನಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಹಝ್ರತ್ ಸೈಯದ್ ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಸಾವಿರ ಜಮಾಅತ್‌ನ ಧರ್ಮಗುರು ಪಿ.ಎಸ್. ತ್ವಾಹಾ ಸಅದಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಇಬ್ರಾಹೀಂ, ಎನ್.ಆದಂ ಕುಂಞಿ, ದಾವೂದ್ ಪಳ್ಳಿಮನೆ ಉಪಸ್ಥಿತರಿದ್ದರು.


ಫ್ಯಾನ್ಸಿ ಟಾಯ್ಸ್ ಸಾಮಗ್ರಿಗಳ ವ್ಯಾಪಾರ, ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಉರೂಸ್ ಗೆ ಬರುವವರು ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು ಮೊದಲಾದ ಸರಕಾರ ನಿರ್ದೇಶಿಸಿರುವ ಕೋವಿಡ್ ನಿಯಮಾವಳಿಯನ್ನು ಪಾಲಿಸತಕ್ಕದ್ದು ಎಂದು ಹಝ್ರತ್ ಸೈಯದ್ ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಸಾವಿರ ಜಮಾಅತ್‌ನ ಧರ್ಮಗುರು ಪಿ.ಎಸ್. ತ್ವಾಹಾ ಸಅದಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News