ಮಣಿಪಾಲ ಕೆಎಂಸಿ: ಅಪರೂಪದ ಗರ್ಭಾಶಯ, ಅಂಡಾಶಯದ ಗೆಡ್ಡೆಗಳ ಯಶಸ್ವಿ ಶಸ್ತ್ರಚಿಕಿತ್ಸೆ

Update: 2021-01-20 14:55 GMT

ಮಣಿಪಾಲ, ಜ.20: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದಿಂದ ಅಪರೂಪದ 2 ಗೆಡ್ಡೆಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಇವುಗಳಲ್ಲಿ ಒಂದು ಗರ್ಭಾಶಯ ಗೆಡ್ಡೆ ಯಾದರೆ, ಇನ್ನೊಂದು ಅಂಡಾಶಯದ ಗೆಡ್ಡೆ. ಆಸ್ಪತ್ರೆಯ ಡಾ. ಮುರಳೀಧರ್ ವಿ. ಪೈ, ಡಾ.ರೇಖಾ ಉಪಾಧ್ಯಾಯ ಮತ್ತವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.

ಗರ್ಭಾಶಯದ ಗೆಡ್ಡೆ: ಒಂದು ಮಗುವಿನ ತಾಯಿಯಾಗಿರುವ 42 ವರ್ಷದ ಮಹಿಳೆ ಕಳೆದ 4 ತಿಂಗಳಿಂದ ವಿಪರೀತ ಹೊಟ್ಟೆನೋವು ಮತ್ತು ಹಠಾತ್ ಊತದೊಂದಿಗೆ ವೈದ್ಯರನ್ನು ಭೇಟಿಯಾಗಿದ್ದರು. ಆಕೆ 8 ತಿಂಗಳ ಗರ್ಭಿಣಿ ಯಾಗಿದ್ದು, ಗರ್ಭಾಶಯದ ಗಾತ್ರಕ್ಕೆ ಅನುಗುಣವಾಗಿ ದೊಡ್ಡ ಗರ್ಭಾಶಯದ ಗೆಡ್ಡೆಯನ್ನು ಹೊಂದಿದ್ದಳು. ಗೆಡ್ಡೆಯ ಬೆಳವಣಿಗೆಯ ವೇಗದಿಂದಾಗಿ ಸರ್ಕೋಮಾ (ಅಪರೂಪದ ಗರ್ಭಾಶಯದ ಕ್ಯಾನ್ಸರ್) ಎಂದು ಶಂಕಿಸಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು.

ಎಂಆರ್‌ಐ ಸ್ಕಾನ್ ದೊಡ್ಡ ಗೆಡ್ಡೆ ಇರುವುದನ್ನು ಖಾತ್ರಿಪಡಿಸಿತು. ಸಮಾಲೋಚನೆ ಮತ್ತು ರೋಗಿಯ ಒಪ್ಪಿಗೆ ಪಡೆದು ಡಾ.ರೇಖಾ ಉಪಾಧ್ಯಾಯ ಅವರು, ಕ್ಷೀಣಗೊಳ್ಳುವ ಮತ್ತು ಸಂಭವನೀಯ ಕ್ಯಾನ್ಸರ್ ವಸ್ತುಗಳ ಸೋರಿಕೆ ತಪ್ಪಿಸಲು ಗರ್ಭಾಶಯವನ್ನು ಗೆಡ್ಡೆಯೊಂದಿಗೆ ಹಾಗೆಯೇ ತೆಗೆದುಹಾಕಲಾಯಿತು. ಗೆಡ್ಡೆಯ ತೂಕ 3.1 ಕೆ.ಜಿ. ಇತ್ತು.

ಅಂಡಾಶಯದ ಗೆಡ್ಡೆ:  23 ವರ್ಷದ ಅವಿವಾಹಿತ ಯುವತಿ ದೊಡ್ಡ ಅಂಡಾಶಯ ಗೆಡ್ಡೆಯ ತೊಂದರೆಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಅವಳ ಚಿಕ್ಕ ವಯಸ್ಸಿನಿಂದಾಗಿ, ಅಪರೂಪದ ಜರ್ಮ್ ಸೆಲ್ ಟ್ಯೂಮರ್ ಇರುವುದನ್ನು ಶಂಕಿಸಲಾಯಿತು. ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ, ಇತರ ಸ್ಥಳಗಳಿಗೆ ಹರಡದೆ ಒಂದು ಅಂಡಾಶಯಕ್ಕೆ ಸೀಮಿತವಾದ ಘನ ಅಂಡಾಶಯದ ಗೆಡ್ಡೆ ಯನ್ನು ಎಂಆರ್‌ಐ ಸ್ಕಾನ್‌ನಲ್ಲಿ ಪತ್ತೆ ಹಚ್ಚಲಾ ಯಿತು. ಆದ್ದರಿಂದ ಗೆಡ್ಡೆ ಯೊಂದಿಗೆ ಒಂದು ಬದಿಯ ಅಂಡಾಶಯವನ್ನು ಡಾ. ರೇಖಾ ಉಪಾಧ್ಯಾಯ ತೆಗೆದು ಹಾಕಿದರು. ಯುವತಿ ಅವಿವಾಹಿತರಾಗಿದ್ದರಿಂದ ಗರ್ಭಾಶಯ ಮತ್ತು ಇತರ ಭಾಗದ ಅಂಡಾಶಯವನ್ನು ಉಳಿಸಿದ್ದಾರೆ. ಇದರಿಂದ ಆಕೆ ಮದುವೆ ಯಾಗಲು ಮತ್ತು ತನ್ನ ಸ್ವಂತ ಮಕ್ಕಳನ್ನು ಹೊಂದಲು ಸಾಧ್ಯವಾಗಲಿದೆ ಎಂದು ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ಕ್ಯಾನ್ಸರ್ ನಿರ್ವಹಣೆಯ ಬಗ್ಗೆ ತರಬೇತಿ ಪಡೆದಿರು ಡಾ. ರೇಖಾ ಉಪಾಧ್ಯಾಯ ಹೇಳಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿ, ನಿರ್ವಹಿಸಿದ್ದಕ್ಕಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News