​ಅಕ್ರಮ ಮರ ಸಾಗಾಟದ ಆರೋಪ: ಗ್ರಾಪಂ ಸದಸ್ಯ ಸೇರಿ ಮೂವರು ಸೆರೆ

Update: 2021-01-20 15:04 GMT

ಸುಳ್ಯ, ಜ. 20: ಅಕ್ರಮ ಮರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಜಾಲ್ಸೂರು ಗ್ರಾಪಂ ಸದಸ್ಯ ಸಹಿತ ಮೂವರನ್ನು ಬಂಧಿಸಿರುವುದಾಗಿ ಪಂಜ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಾಲ್ಸೂರು ಗ್ರಾಪಂ ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ ಹಾಗೂ ಮುಹಮ್ಮದ್ ಸುಹೈಬ್ ದೇಲಂಪಾಡಿ ಮತ್ತು ಅಭಿಲಾಷ್ ಗೌಡ ಅರಕಲಗೂಡು ಬಂಧಿತ ಆರೋಪಿಗಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಿರಾಲ್‌ಬೋಗಿ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಇಟ್ಟಿರುವುದಲ್ಲದೆ, ಸೊತ್ತುಗಳನ್ನು ಸಾಗಾಟ ಮಾಡಿರುವ ಪ್ರಕರಣವನ್ನು ಪಂಜ ವಲಯಾರಣ್ಯಾಧಿಕಾರಿಗಳ ತಂಡ ಬೇಧಿಸಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದಲ್ಲಿ 26 ಕಿರಾಲ್‌ಬೋಗಿ ದಿಮ್ಮಿಗಳು, ಒಂದು ಜೆಸಿಬಿ ಯಂತ್ರ, ಒಂದು ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ದಿಮ್ಮಿಗಳು ಹಾಗೂ ವಾಹನಗಳ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸ್ಥಳದಿಂದ ಸಾಗಾಟವಾಗಿದ್ದ ಕಿರಾಲ್‌ಬೋಗಿಯ 27 ದಿಮ್ಮಿಗಳು, ಒಂದು ಲಾರಿಯನ್ನು ಕೇರಳ ಗಡಿ ಭಾಗದಲ್ಲಿ ವಶಪಡಿಸಲಾಗಿದೆ. ಇದರ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಲನ್ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News