ಉತ್ತರ ಪ್ರದೇಶ ವಿಧಾನ ಪರಿಷತ್ ಗ್ಯಾಲರಿಯಲ್ಲಿ ಸಾವರ್ಕರ್ ಭಾವಚಿತ್ರ

Update: 2021-01-20 15:20 GMT
ಸಾಂದರ್ಭಿಕ ಚಿತ್ರ

ಲಕ್ನೋ, ಜ. 20: ಉತ್ತರಪ್ರದೇಶ ವಿಧಾನ ಪರಿಷತ್‌ನ ಗ್ಯಾಲರಿಯಲ್ಲಿ ಹಿಂದುತ್ವವಾದಿ ಸಾವರ್ಕರ್ ಅವರ ಭಾವಚಿತ್ರ ಹಾಕಲಾಗಿದ್ದು, ಇದಕ್ಕೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ತೀವ್ರ ವಿರೋಧ ವ್ಯಕ್ತಪಡಿಸಿವೆ. ಗ್ಯಾಲರಿಯಿಂದ ಸಾವರ್ಕರ್ ಭಾವಚಿತ್ರ ತೆಗೆಯುವಂತೆ ವಿರೋಧ ಪಕ್ಷಗಳು ಒತ್ತಾಯಿಸಿವೆ.

ಈ ಬಗ್ಗೆ ಕಾಂಗ್ರೆಸ್ ಎಂಎಲ್‌ಸಿ ದೀಪಕ್ ಸಿಂಗ್ ಅವರು ವಿಧಾನ ಪರಿಷತ್‌ನ ಸಭಾವತಿಗೆ ಪತ್ರ ಬರೆದಿದ್ದು, ಸಾವರ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸುವಂತೆ ಕೋರಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ವಿಧಾನ ಪರಿಷತ್‌ನಲ್ಲಿ ಮಂಗಳವಾರ ಸಾವರ್ಕರ್ ಭಾವಚಿತ್ರವನ್ನು ಉದ್ಘಾಟಿಸಿದ್ದರು. ಬ್ರಿಟೀಷರ ದೌರ್ಜನ್ಯದ ವಿರುದ್ಧ ಸೆಟೆದು ನಿಂತ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದೊಂದಿಗೆ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವುದು ಸ್ವಾತಂತ್ರ ಹೋರಾಟಗಾರರಿಗೆ ಮಾಡುವ ಅವಮಾನ ಎಂದು ಸಿಂಗ್ ವಿಧಾನ ಪರಿಷತ್ ಸಭಾಪತಿ ರಮೇಶ್ ಯಾದವ್ ಅವರಿಗೆ ಮಂಗಳವಾರ ಸಲ್ಲಿಸಿದ ಪತ್ರದಲ್ಲಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲು ವಿಧಾನ ಪರಿಷತ್ ಅಧ್ಯಕ್ಷರು ವಿಧಾನ ಪರಿಷತ್‌ನ ಪ್ರಾಥಮಿಕ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News