ಜ.24ಕ್ಕೆ ಈಜು ದಾಖಲೆಗೆ ಗಂಗಾಧರ ಕಡೆಕಾರು ಪ್ರಯತ್ನ

Update: 2021-01-20 15:27 GMT

ಉಡುಪಿ, ಜ.20: ಪದ್ಮಾಸನದ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಬ್ರೆಸ್ಟ್‌ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಒಂದು ಕಿ.ಮೀ. ಈಜುವ ಮೂಲಕ ‘ಬುಕ್ ಆಫ್ ರೆಕಾರ್ಡ್’ನಲ್ಲಿ ಹೊಸ ದಾಖಲೆ ಬರೆಯುವ ಪ್ರಯತ್ನವನ್ನು ಕಡೆಕಾರಿನ 65ರ ಹರೆಯದ ಗಂಗಾಧರ ಜಿ.ಕಡೆಕಾರು ಜ.24ರ ರವಿವಾರ ಮುಂಜಾನೆ ನಡೆಸಲಿದ್ದಾರೆ.

ಕಡೆಕಾರಿನ ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್‌ನ ಉಪಾಧ್ಯಕ್ಷ ಹರ್ಷ ಮೈಂದನ್ ಅವರು ಇಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜ.24ರ ರವಿವಾರ ಮುಂಜಾನೆ ಎಂಟು ಗಂಟೆಗೆ ಪಡುಕೆರೆ ದೇವಿ ಭಜನಾ ಮಂದಿರದ ಬಳಿಯ ಕಡಲ ಕಿನಾರೆಯಲ್ಲಿ ಅವರು ಈ ಪ್ರಯತ್ನ ನಡೆಸಲಿದ್ದಾರೆ ಎಂದವರು ಹೇಳಿದರು.

ಸಾರಿಗೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿರುವ ಗಂಗಾಧರ ಜಿ.ಕಡೆಕಾರ್ ಬಾಲ್ಯದಿಂದಲೇ ಈಜಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು, ರಾಷ್ಟ್ರ, ರಾಜ್ಯ ಮಟ್ಟದ ಹಲವು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಈವರೆಗೆ 31 ಚಿನ್ನ, 16 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಉತ್ತಮ ಯೋಗಪಟು ವಾಗಿರುವ ಇವರು ನಿವೃತ್ತಿಯ ಬಳಿಕ ಮಕ್ಕಳೂ ಸೇರಿದಂತೆ ಎಲ್ಲಾ ಆಸಕ್ತರಿಗೂ ಈಜು ಕಲಿಸುವುದಕ್ಕೆ ಹೆಚ್ಚು ಒತ್ತು ನೀಡುತಿದ್ದಾರೆ ಎಂದರು.

ಇದೀಗ ಅವರು ಈಜಿನಲ್ಲಿ ಹೊಸ ದಾಖಲೆ, ಸಾಧನೆಯೊಂದನ್ನು ಮಾಡಲು ಮುಂದಾಗಿದ್ದು, ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಬ್ರೆಸ್ಟ್‌ಸ್ಟ್ರೋಕ್ ಶೈಲಿಯಲ್ಲಿ ಅರಬಿಸಮುದ್ರದಲ್ಲಿ ಒಂದು ಕಿ.ಮೀ. ದೂರ ಈಜಲು ಮುಂದಾಗಿದ್ದಾರೆ. ಈ ವಿಭಾಗದಲ್ಲಿ ಈಗಿನ ದಾಖಲೆ 800ಮೀ. ಆಗಿದೆ ಎಂದು ಹರ್ಷ ಮೈಂದನ್ ತಿಳಿಸಿದರು.

ಗಂಗಾಧರ ಅವರ ಸಾಧನೆಯ ವೇಳೆ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಪಂ ಅಧ್ಯಕ್ಷ ದಿನಕರಬಾಬು, ಕರಾವಳಿ ಕಾವಲು ಪಡೆ ಎಸ್ಪಿ ಚೇತನ್ ಆರ್. ಎಡಿಸಿ ಸದಾಶಿವ ಪ್ರಭು, ಯಶ್ಪಾಲ್ ಸುವರ್ಣ ಮುಂತಾದವರು ಉಪಸ್ಥಿತರಿರುವರು. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನ ಪ್ರತಿನಿಧಿಯೊಬ್ಬರು ಈ ಸಂದರ್ಭದಲ್ಲಿ ತೀರ್ಪುಗಾರರಾಗಿರುವರು ಎಂದು ಗಂಗಾಧರ ಕಡೆಕಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಉಪಾಧ್ಯಕ್ಷ ಚಂದ್ರ ಎ.ಕುಂದರ್, ನಗರಸಭಾ ಸದಸ್ಯ ವಿಜಯ ಕುಂದರ್, ಪಾಂಡುರಂಗ ಮಲ್ಪೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News