ಬಿ.ಸಿ.ರೋಡ್ : ಜ. 22ರಂದು ರೈತ, ದಲಿತ, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಧರಣಿ ಸತ್ಯಾಗ್ರಹ

Update: 2021-01-20 17:18 GMT

ಬಂಟ್ವಾಳ, ಜ.20: ರೈತ, ದಲಿತ, ಕಾರ್ಮಿಕ ಮತ್ತು ಜನವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಬಂಟ್ವಾಳ ತಾಲೂಕು ಮಟ್ಟದ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ಜನವರಿ 22ರಂದು ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂದೆ ಬೆಳಗ್ಗೆ 10:30ರಿಂದ ಸಂಜೆ 4 ಗಂಟೆಯ ವರೆಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್ ತಿಳಿಸಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ ಸಹಿತ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಎರಡು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ದಕ್ಷಿಣ ಕನ್ನಡ ಜಿಲ್ಲೆ ಪ್ರತೀ ತಾಲೂಕಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಜನವರಿ 26ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ ಮಂಗಳೂರು ಮಿನಿವಿಧಾನ ಸೌಧದ ವರೆಗೆ ಜಿಲ್ಲೆಯ ಸಾವಿರಾರು ರೈತರು ತಮ್ಮ ಟ್ರ್ಯಾಕ್ಟರ್ ಗಳೊಂದಿಗೆ ಬೃಹತ್ ಮೆರವಣಿಗೆ ಹಾಗೂ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ತಂದುಕೊಡುವ ರೈತ, ದಲಿತ, ಕಾರ್ಮಿಕ ಹಾಗೂ ಜನ ವಿರೋಧಿಯಾದ ಮಸೂದೆಗಳನ್ನು ಯಾವುದೇ ಸಾರ್ವಜನಿಕ ಚರ್ಚೆ ಇಲ್ಲದೆ ಜಾರಿ ಮಾಡುತ್ತಿದೆ. ಇದನ್ನು ವಿರೋಧಿಸುವವರಿಗೆ ಅರ್ಬನ್ ನಕ್ಸಲ್, ದೇಶ ವಿರೋಧಿ ಹಣೆಪಟ್ಟಿ ಕಟ್ಟಿ ರೈತರ ಹೋರಾಟದ ದಾರಿ ತಪ್ಪಿಸಲು ಸರಕಾರ ಪ್ರಯತ್ನಿಸುತ್ತಿದೆ. ಆದರೂ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸಲಿದ್ದಾರೆ ಎಂದು ಹೇಳಿದರು. 

ಕೇಂದ್ರ ಸರಕಾರ ದೇಶದ ಭೂಮಿ, ಕೃಷಿ, ಮಾರುಕಟ್ಟೆ, ಆಹಾರ ಸಾರ್ವಭೌಮತೆ ಖಾಸಗೀಕರಣದ ಹೆಸರಲ್ಲಿ ಇಡೀ ದೇಶದ ಸಂಪತ್ತು ಕೆಲವೇ ಕೆಲವು ಕಾರ್ಪೊರೇಟ್ ವ್ಯಕ್ತಿಗಳ ಸುಪರ್ದಿಗೆ ನೀಡುತ್ತಿದೆ. ದೇಶದ ಲಾಭದಾಯಕ ಸಂಸ್ಥೆಗಳನ್ನೂ ಖಾಸಗಿಯ ವರಿಗೆ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಸಣ್ಣ ಪುಟ್ಟ ಕೈಗಾರಿಕೆಗಳು ಬಾಗಿಲು ಮುಚ್ಚಲಿವೆ. ದೇಶದಲ್ಲಿ ಉದ್ಯೋಗ ಕ್ಷಾಮ ತಲೆದೋರಲಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಲಿದೆ.

ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವುದು ಕೇವಲ ಒಂದೆರಡು ರಾಜ್ಯದ ರೈತರ ಪ್ರತಿಭಟನೆ ಅಲ್ಲ. ಅಲ್ಲಿ ದೇಶದ ಬಹುತೇಕ ರಾಜ್ಯಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕೇವಲ ರೈತರ ಸಮಸ್ಯೆ ಅಲ್ಲ. ದೇಶದ ಪ್ರತೀಯೊಂದು ಜನರ ಸಮಸ್ಯೆಯಾಗಿದೆ. ಕೃಷಿ ಕ್ಷೇತ್ರ ಕಾರ್ಪೊರೇಟ್ ಕಂಪೆನಿಗಳ ಪಾಲಾದರೆ ದಿನಬಳಕೆ ವಸ್ತುಗಳ ಬೆಲೆಯನ್ನು ಅವರೇ ನಿರ್ಧರಿಸಲಿದ್ದಾರೆ. ಹೀಗಾಗಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿ ದೇಶ ಭೀಕರ ಪರಿಸ್ಥಿತಿ ಎದುರಿಸಲಿದೆ. ದೇಶಕ್ಕೆ ಮಾರಕವಾದ ಈ ಕಾಯ್ದೆ ಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲಾ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಸಂತ್ರಸ್ತ ಸಮಿತಿಯ ಮುಖಂಡ ರಾಯ್ ಕಾರ್ಲೋ, ಸಾಮಾಜಿಕ ಕಾರ್ಯಕರ್ತ ಅಲ್ತಾಫ್ ತುಂಬೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News