ಕೋವಿಡ್-19 ಲಸಿಕೆ ಸ್ವೀಕರಿಸಿದ ಬಳಿಕ ಆಶಾ ಕಾರ್ಯಕರ್ತೆಗೆ ಆರೋಗ್ಯ ಸಮಸ್ಯೆ

Update: 2021-01-21 07:12 GMT

ಚಂಡಿಗಡ: ಪಂಜಾಬ್ ನ ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಕೋವಿಡ್-19 ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ ಬಳಿಕ ಫಿರೋಝ್ ಪುರ ಮೂಲದ ಆಶಾ ಕಾರ್ಯಕರ್ತೆಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

35ರ ವಯಸ್ಸಿನ ಆಶಾ ಕಾರ್ಯಕರ್ತೆ ಬಿಂದಿಯಾಗೆ ಕೋವಿಡ್ ನ ಮೊದಲ ಡೋಸ್ ಸ್ವೀಕರಿಸಿದ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಬುಧವಾರ ಫಿರೋಝ್‍ಪುರದ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಬಿಂದಿಯಾ ಅವರ ಮೇಲೆ ತೀವ್ರ ನಿಗಾವಹಿಸಲಾಗಿದೆ.

"ಲಸಿಕೆಯ ಡೋಸ್ ಸ್ವೀಕರಿಸಿದ ಬಳಿಕ ಮನೆಗೆ ಹೋಗಿದ್ದೆ. ಇದ್ದಕ್ಕಿದ್ದಂತೆ ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಕಂಡುಬಂದಿದೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರ ನನ್ನನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ'' ಎಂದು ಬಿಂದಿಯಾ ಹೇಳಿದ್ದಾರೆ.

"ಬಿಂದಿಯಾ ಅವರ ಆರೋಗ್ಯ ಸ್ಥಿರವಾಗಿದೆ. ಆಕೆಗೆ ಮಂಗಳವಾರ ಲಸಿಕೆ ನೀಡಲಾಗಿತ್ತು. ನಂತರ ಅವರು ಉಸಿರಾಟದ ಸಮಸ್ಯೆ ಇರುವುದಾಗಿ ಹೇಳಿದರು. ಮಂಗಳವಾರ ರಾತ್ರಿ ಅವರು ಮನೆಯಲ್ಲೇ ಇದ್ದರು. ಬುಧವಾರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆಗೆ ಒಳಗಾಗಿದ್ದು, ಇದು ಕೊರೋನ ಲಸಿಕೆಯ ಅಡ್ಡಪರಿಣಾಮವಾಗಿದೆ ಎಂದು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ'' ಎಂದು ಫಿರೋಝ್‍ಪುರ ಸರಕಾರಿ  ಆಸ್ಪತ್ರೆಯ ತುರ್ತು ವೈದ್ಯಕೀಯ ಅಧಿಕಾರಿ ಡಾ.ಶಶಿ ಭೂಷಣ್ ‘ಇಂಡಿಯಾ ಟುಡೆ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News