ಬಿಎಂಸಿ ನೋಟಿಸ್ ವಿರುದ್ಧ ಸೋನು ಸೂದ್ ಸಲ್ಲಿಸಿರುವ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2021-01-21 09:20 GMT

ಮುಂಬೈ: ಮುಂಬೈ ಮಹಾನಗರದ ಜುಹು ಪ್ರದೇಶದಲ್ಲಿರುವ ತನ್ನ ವಸತಿ ಕಟ್ಟಡವನ್ನು ಅನುಮತಿ ಇಲ್ಲದೆ ವಾಣಿಜ್ಯ ಕಟ್ಟಡವಾಗಿ ಪರಿವರ್ತಿಸಿದ್ದಕ್ಕೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ನೀಡಿದ್ದ ನೋಟಿಸ್ ವಿರುದ್ಧ ಬಾಲಿವುಡ್ ನಟ ಸೋನು ಸೂದ್ ಸಲ್ಲಿಸಿರುವ ಮೇಲ್ಮನವಿ ಹಾಗೂ ಮಧ್ಯಂತರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು ವಜಾಗೊಳಿಸಿದೆ.

ನಟನ ಮೇಲ್ಮನವಿ ಹಾಗೂ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್, ಕಾನೂನು ಶ್ರದ್ಧೆಯಿಂದ ಇರುವವರಿಗೆ ಸಹಾಯ ಮಾಡುತ್ತದೆ ಎಂದರು.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಿಎಂಸಿ ನೀಡಿದ್ದ ನೋಟಿಸ್ ಗೆ ಉತ್ತರಿಸಲು 10 ವಾರಗಳ ಕಾಲಾವಕಾಶವನ್ನು ನೀಡಬೇಕು. ಅಕ್ರಮ ಕಟ್ಟಡ ಧ್ವಂಸ ಕಾರ್ಯ ಆರಂಭಿಸದಂತೆ ಬಿಎಂಸಿಗೆ ನಿರ್ದೇಶನ ನೀಡುವಂತೆ ಸೂದ್ ಪರ ವಕೀಲ ಅಮೋಘ್ ಸಿಂಗ್ ಹೈಕೋರ್ಟ್ಗೆ ಮನವಿ ಮಾಡಿದರು.

ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ನಟನಿಗೆ ಈ ಹಿಂದೆ ಸಾಕಷ್ಟು ಅವಕಾಶಗಳಿದ್ದವು. ಅಗತ್ಯವಿದ್ದರೆ ಅವರು ಬಿಎಂಸಿಯನ್ನು ಸಂಪರ್ಕಿಸಬಹುದು. ಚೆಂಡು ಈಗ ಬಿಎಂಸಿ ಕಚೇರಿಯಲ್ಲಿದೆ…ನೀವು(ಸೋನು ಸೂದ್)ಕಚೇರಿಯನ್ನು ಸಂಪರ್ಕಿಸಬಹುದು. ನೀವು(ಸೋನು ಸೂದ್)ತಡವಾಗಿ ಬಂದಿದ್ದೀರಿ. ನಿಮಗೆ ಸಾಕಷ್ಟು ಅವಕಾಶವಿದ್ದವು ಎಂದು ಹೇಳಿತು.

ಸೋನು ಸೂದ್ ಅವರು ಆರು ಅಂತಸ್ತಿನ ವಸತಿ ಕಟ್ಟಡ ಶಕ್ತಿ ಸಾಗರ್ ನಲ್ಲಿ ಅಗತ್ಯ ಅನುಮತಿ ತೆಗೆದುಕೊಳ್ಳದೆ ಅದನ್ನು ಹೋಟೆಲ್ ಆಗಿ ಪರಿವರ್ತಿಸಿದ್ದರು ಎಂದು ಬಿಎಂಸಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News