ಪಶ್ಚಿಮ ಬಂಗಾಳ: "ಗೋಲಿ ಮಾರೋ.." ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರ ಬಂಧನ

Update: 2021-01-21 09:52 GMT

ಕೋಲ್ಕತಾ: ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರವಾಗಿರುವ ಸುವೆಂದು ಅಧಿಕಾರಿಯ ರ್ಯಾಲಿಯ ವೇಳೆ ಕೇಳಿಬಂದಿರುವ "ಗೋಲಿ ಮಾರೋ…" ಘೋಷಣೆಗೆ ಸಂಬಂಧಿಸಿ ಹೂಗ್ಲಿ ಜಿಲ್ಲಾ ಯುವ ವಿಭಾಗದ ಮುಖಂಡ ಸುರೇಶ್ ಸಾಹು ಸಹಿತ ಮೂವರು ಬಿಜೆಪಿ ಕಾರ್ಯಕರ್ತರನ್ನು ಗುರುವಾರ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಬುಧವಾರ ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಅಧಿಕಾರಿಯ ರೋಡ್ ಶೋನಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಪ್ರಚೋದನಾತ್ಮಕ ಘೋಷಣೆ ಕೂಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದಾರೆ.

ಸುವೇಂದು ಅಧಿಕಾರಿ, ಹೂಗ್ಲಿ ಸಂಸದೆ ಲಾಕೆಟ್ ಚಟರ್ಜಿ ಹಾಗೂ ರಾಜ್ಯಸಭಾ ಸದಸ್ಯ ಸ್ವಪ್ನ ದಾಸ್ ಗುಪ್ತಾ ನಗರದ ರಥ್‍ಟಾಲಾ ಪ್ರದೇಶದಲ್ಲಿ ಟ್ರಕ್ ಏರಿ ಸಾಗುತ್ತಿದ್ದಾಗ ಬಿಜೆಪಿ ಧ್ವಜ ಹಾಗೂ ತ್ರಿವರ್ಣ ಧ್ವಜವನ್ನು ಹಿಡಿದಿದ್ದ ಕಾರ್ಯಕರ್ತರು  ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದರು.

ಬಿಜೆಪಿ ಧ್ವಜವನ್ನು ಹಿಡಿದುಕೊಂಡು ಎತ್ತಿದ ಈ ಘೋಷಣೆಯನ್ನು ಪಕ್ಷವು ಬೆಂಬಲಿಸುವುದಿಲ್ಲ ಎಂದು ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News