ಕಚೇರಿ ಕೆಲಸ ಮಾಡುತ್ತಲೇ ಮುಂಬೈಯಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ: ಮೂವರು ಸ್ನೇಹಿತರ ವಿಶಿಷ್ಟ ಸಾಧನೆ

Update: 2021-01-21 08:52 GMT
Photo: indianexpress.com

ಮುಂಬೈ: ಕೋವಿಡ್ ಸಾಂಕ್ರಾಮಿಕದ ನಡುವೆ ಮುಂಬೈಯಿಂದ ಕನ್ಯಾಕುಮಾರಿಗೆ ಮಹಾರಾಷ್ಟ್ರದ ಮೂವರು ಸ್ನೇಹಿತರು ವಿಶಿಷ್ಟ ಸೈಕಲ್ ಯಾತ್ರೆ ಕೈಗೊಂಡು 1,687 ಕಿ.ಮೀ. ದೂರ ಕ್ರಮಿಸಿದ್ದಾರೆ. ಅಷ್ಟಕ್ಕೂ ತಮ್ಮ ಯಾತ್ರೆಯ ಸಮಯದಲ್ಲಿ ತಮ್ಮ ಕೆಲಸಕ್ಕೆ ರಜಾ ಹಾಕದೇ ಇದ್ದ ಈ ಮೂವರು ವೃತ್ತಿಪರರೂ ಯಾತ್ರೆಯ ನಡುವೆ ಹೆದ್ದಾರಿ ಬದಿಯಲ್ಲಿರುವ ಢಾಬಾ ಹಾಗೂ ಲಾಡ್ಜುಗಳಲ್ಲಿಯೇ ಕುಳಿತುಕೊಂಡು ತಮ್ಮ ಕಚೇರಿ ಕೆಲಸಗಳನ್ನೂ ಯಾತ್ರೆಯ ಮಧ್ಯದಲ್ಲಿಯೇ ನಿರ್ವಹಿಸಿದ್ದಾರೆ.

ಬೇಕನ್ ಜಾರ್ಜ್, ಆಲ್ವಿನ್ ಜೋಸೆಫ್ ಹಾಗೂ ರತೀಶ್ ಭಲೆರಾವೋ ಎಂಬ ಈ ಮೂವರು ಕಳೆದೆರಡು ದಶಕಗಳಿಂದಲೂ ಸ್ನೇಹಿತರಾಗಿದ್ದರು. ಪ್ರವಾಸ ಮತ್ತು ಸಾಹಸ ಪ್ರಿಯರಾದ ಇವರಿಗೆ ವರ್ಕ್ ಫ್ರಮ್ ಹೋಂ ಸಂಸ್ಕೃತಿ ಬೋರ್ ಹೊಡೆಸಿತ್ತು. ಕೊನೆಗೆ ಸೈಕಲ್ ಯಾತ್ರೆ ಕೈಗೊಳ್ಳುತ್ತಲೇ ಕರ್ತವ್ಯವನ್ನೂ ನಿಭಾಯಿಸಲು ಇವರು ಮುಂದಾಗಿ ಹಲವು ಸವಾಲುಗಳ ನಡುವೆ ಯಶಸ್ಸು ಸಾಧಿಸಿದ್ದಾರೆ.

ಸೈಕಲ್ ಯಾತ್ರೆಗೆ ತೆರಳುವ ಯೋಜನೆ ಮೊದಲು ಹೊಳೆದಿದ್ದು 31 ವರ್ಷದ ಜಾರ್ಜ್ ಅವರಿಗೆ. ಕಳೆದ ವರ್ಷದ ನವೆಂಬರ್ ಅಂತ್ಯದಲ್ಲಿ ತಮ್ಮ ಯಾತ್ರೆ ಆರಂಭಿಸಲು ಇನ್ನೇನು ಎರಡು ದಿನಗಳಿವೆಯೆನ್ನುವಾಗ ಇತರ ಇಬ್ಬರು ಸ್ನೇಹಿತರನ್ನು ಸಂಪರ್ಕಿಸಿದಾಗ ಅವರೂ ಜತೆಗೆ ತೆರಳಲು ಒಪ್ಪಿದರು.

ತಮ್ಮ ಸಾಮಾನುಗಳ ಜತೆಗೆ ಕಚೇರಿ ಕೆಲಸ ಕಾರ್ಯಕ್ಕೆ ಅಗತ್ಯವಿದ್ದ ಸಾಧನಗಳನ್ನು ಕೊಂಡೊಯ್ಯಬೇಕಾಗಿದ್ದು ಕೂಡ ಸವಾಲಾಗಿತ್ತು. ಆದರೆ ಅದರಲ್ಲೂ ಒಂದು ಖುಷಿಯಿತ್ತು ಎಂದು ಮೂವರೂ ವಿವರಿಸುತ್ತಾರೆ.

ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ತಮ್ಮ ಸೈಕಲ್ ಯಾತ್ರೆ ಆರಂಭಿಸುತ್ತಿದ್ದ ಅವರು ಸುಮಾರು 11 ಗಂಟೆಗೆ ಸರಿಯಾಗಿ ನಿಗದಿತ ಸ್ಥಳಕ್ಕೆ ಆಗಮಿಸಿ ನಂತರ ಅಲ್ಲಿ ತಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿದ್ದರು. ಪ್ರತಿ ದಿನ ಸರಾಸರಿ 80 ಕಿ.ಮೀ. ದೂರ ಕ್ರಮಿಸುತ್ತಿದ್ದ ಅವರು ವಾರಾಂತ್ಯಗಳಲ್ಲಿ ಹೆಚ್ಚಿನ ದೂರ ಕ್ರಮಿಸುತ್ತಿದ್ದರು.

ಕೆಲಸದ ನಡುವೆ ಈ ಸೈಕಲ್ ಯಾತ್ರೆ ಕೈಗೊಂಡಿದ್ದರಿಂದ ಸಾಮಾನ್ಯ ಸೈಕಲ್ ಯಾತ್ರೆಯಂತೆ ಅವರು ಭೇಟಿ ನೀಡುವ ಸ್ಥಳಗಳ ವಿಶೇಷತೆಗಳನ್ನು ನೋಡಲು ಅವರಿಗೆ ಸಾಧ್ಯವಾಗಿಲ್ಲ, ಆದರೆ ಬೇರೆ ಬೇರೆ ಕಡೆಯ ಜನರು, ಅವರ ಆಹಾರ ಪದ್ಧತಿಗಳು ಹಾಗೂ ಜೀವನ ಶೈಲಿಯ ಪರಿಚಯವಾಯಿತು, ಜತೆಗೆ ಪ್ರಕೃತಿ ಸೌಂದರ್ಯ ಆಸ್ವಾದಿಸುವ ಅವಕಾಶವೂ ದೊರಕಿತ್ತು ಎಂದು ಅವರು ಹೇಳುತ್ತಾರೆ.

ಸುಮಾರು ಒಂದು ತಿಂಗಳ ಅವಧಿಯ ಅವರ ಈ ಯಾತ್ರೆ ಮುಂಬೈ ಪುಣೆ, ಸತಾರ, ಕೊಲ್ಲಾಪುರ್, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಸೇಲಂ, ಮಧುರೈ ಹಾಗೂ ತಿರುನೆಲ್ವೇಲಿ ಮೂಲಕ ಸಾಗಿದೆ. ಪ್ರತಿಯೊಬ್ಬರೂ ಈ ಯಾತ್ರೆಗೆ ಅಂದಾಜು ರೂ. 25,000 ವ್ಯಯಿಸಿದ್ದು ಇದರ ಹೆಚ್ಚಿನ ಪಾಲು ಲಾಡ್ಜುಗಳ ಬಿಲ್ ಆಗಿತ್ತು.

ಒಟ್ಟಾರೆಯಾಗಿ ಕೋವಿಡ್ ಸಾಂಕ್ರಾಮಿಕದ ನಡುವಿನ ತಮ್ಮ ಈ ಸೈಕಲ್ ಯಾತ್ರೆ ತಮಗೆ ಖುಷಿ ನೀಡಿದೆ ಎಂದು ಮೂವರೂ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News