ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸಿ: ಸರಕಾರಕ್ಕೆ ಎಚ್.ವಿ. ಅನಂತಸುಬ್ಬರಾವ್ ಒತ್ತಾಯ

Update: 2021-01-21 08:52 GMT

ಮಂಗಳೂರು, ಜ.21: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಪರವಾಗಿ ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಸರಕಾರಕ್ಕೆ ಈಗಾಗಲೇ ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸಾರಿಕೆಯನ್ನು ವ್ಯಾಪಾರ ದೃಷ್ಟಿಯಿಂದ ನೋಡದೆ ನೌಕರರ ಹಿತದೃಷ್ಟಿಯನ್ನು ಕಾಪಾಡುವ ಜತೆಗೆ ಸಾರಿಗೆ ನಿಮಗಳಿಗೆ ಆರ್ಥಿಕ ಬೆಂಬಲ ನೀಡಬೇಕು ಎಂದು ಹೇಳಿದರು.

1958ರಿಂದ 1995ರವರೆಗೆ ಸಾರಿಗೆ ನಿಗಮದ ಆಡಳಿತ ವರ್ಗವು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ದ್ವಿಪಕ್ಷೀಯ ಒಪ್ಪಂದ ಮಾಡುತ್ತಿದ್ದವು. ಆದರೆ 1996ರಿಂದ ಈ ಪದ್ಧತಿ ಕೈಬಿಡಲಾಯಿತು. ಸಕಾರರದ ನೀತಿಯಿಂದಾಗಿ ಸರಕಾರಿ ಹಾಗೂ ನಿಗಮಗಳ ನೌಕರರ ವೇತನದಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ. ರಾಜ್ಯ ಸರಕಾರ ನೌಕರರ ಬೇಡಿಕೆಯನ್ನು ಕೈಗಾರಿಕಾ ನ್ಯಾಯಾಧೀಕರಣಕ್ಕೆ ಒಪ್ಪಿಸಿತ್ತು. ಅದರಂತೆ 2017ರಂದು ನ್ಯಾಯಾಧೀಕರಣ ತೀರ್ಪು ನೀಡಿ 2004ರ ಜನವರಿ 1ರಿಂದ ಅನ್ವಯವಾಗುವಂತೆ ಎಲ್ಲಾ ಸಾರಿಗೆ ನಿಗಮಗಳ ನೌಕರರಿಗೆ ವೇತನ ಹೆಚ್ಚಳವನ್ನು ಶೇ. 6 ಭಾಗ ಬಡ್ಡಿ ಸಹಿತ ನೀಡುವಂತೆ ಹೇಳಿದೆ. 2004ರಿಂದ ಎರಡು ಪಟ್ಟು ಚಾಲಕ ಹಾಗೂ ನಿರ್ವಾಹಕರ ದೈನಂದಿನ ಭತ್ತೆ ನೀಡುವಂತೆ ಆಜ್ಞೆ ಮಾಡಿದೆ. ಆದರೆ ಈ ತೀರ್ಪು ಜಾರಿ ಮಾಡುವ ಬದಲು ಆಡಳಿತ ವರ್ಗ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ತೀರ್ಪಿಗೆ ತಡೆಯಾಜ್ಞೆ ತಂದಿದೆ. ಇಂತಹ ಕಾರ್ಮಿಕ ವಿರೋಧಿ ನೀತಿ ನೌಕರರಲ್ಲಿ ವೇತನದ ವಿಷಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ 2020ರಿಂದ ವೇತನ ಹೆಚ್ಚಳ ಮಾಡುವಾಗ ಈ ತೀರ್ಪನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ತಡೆಹಿಡಿಯಲಾಗಿರುವ ತುಟ್ಟಿಭತ್ತೆಯನ್ನು ನೀಡುವುದು, ಗ್ರಾಚ್ಯುವಿಟಿ ಪಾವತಿ, ವೈದ್ಯಕೀಯ ಸೌಲಭ್ಯ ಒದಗಿಸುವುದು, ಅಂತರ ನಿಗಮ ವಾರ್ಗವಣೆ ಮಾಡುವುದು, ಸಾರಿಗೆ ನಿಮಗಳ ನೌಕರರಿಗೆ ಆಗುತ್ತಿರುವ ಹಿಂಸೆ ಕಿರುಕುಳ ಬಗ್ಗೆ ಸಾರಿಗೆ ಆಡಳಿತ ವರ್ಗದಿಂದ ಸಭೆ ನಡೆಸಬೇಕೆಂದು ಅವರು ಆಗ್ರಹಿಸಿದರು.

ಇದಲ್ಲದೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳನ್ನು ಒಂದಾಗಿಸಬೇಕು. ಪ್ರತಿ ವರ್ಷ ಆಯವ್ಯಯದಲ್ಲಿ ಸಾರಿಗೆ ನಿಗಮಗಳಿಗೆ ಒಂದು ಸಾವಿರ ಕೋಟಿ ರೂ. ನೀಡಬೇಕು. ಸರಕಾರವು ಸಾರಿಗೆ ನಿಗಮಗಳ ನೌಕರರ ವೇತನವನ್ನು ಸಂಪೂರ್ಣವಾಗಿ ನೀಡಬೇಕು. ಸಾರಿಗೆ ನಿಗಮಗಳ ಮೇಲೆ ಹೊರಿಸಿರುವ ಮೋಟಾರು ವಾಹನ ತೆರಿಗೆಯನ್ನು ರದ್ದುಪಡಿಸಬೇಕು. ಸಾರಿಗೆ ನಿಗಮಗಳಿಗೆ ಹೆದ್ದಾರಿ ಸುಂಕದಿಂದ ವಿನಾಯಿತಿ ನೀಡಬೇಕು. ಇಂಧನದ ಮೇಲಿನ ಸುಂಕುವನ್ನು ಶೇ. 50 ಕಡಿತಗೊಳಿಸಬೇಕು. ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌ಗಳ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಸರಕಾರ ಬಾಕಿ ಉಳಿಸಿರುವ ಹಣವನ್ನು ಕೂಡಲೇ ಒದಗಿಸಬೇಕು ಎಂಬ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕೋಶಾಧಿಕಾರಿ ಎಚ್. ಚಂದ್ರೇಗೌಡ, ಜತೆ ಕಾರ್ಯದರ್ಶಿ ರಾಜಗೋಪಾಲ್ ಟಿ.ಎಲ್., ಸೀತಾರಾಮ ಬೇರಿಂಜ, ಕರುಣಾಕರ ಎಂ. ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಮಹಿಳಾ ಸಿಬ್ಬಂದಿಗೆ ಕಿರುಕುಳ ಬಗ್ಗೆ ಸಚಿವರ ಗಮನಕ್ಕೆ

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲಿ ಮುಖ್ಯಸ್ಥರಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿರುವ ಕುರಿತಂತೆ ಮಹಿಳಾ ನಿಯೋಗವೊಂದು ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಅವರು ಈ ಕುರಿತಂತೆ ಸಾಕಷ್ಟು ಸಾಕ್ಷಗಳನ್ನು ಒದಗಿ ಸಿದ್ದು, ಈ ಬಗ್ಗೆ ಸಾರಿಗೆ ಸಚಿವರ ಗಮನ ಸೆಳೆಯಲಾಗುವುದು ಎಂದು ಅನಂತ ಸುಬ್ಬರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News