ಮಗುವಿನ ಮೇಲೆ ಅತ್ಯಾಚಾರ, ಹತ್ಯೆ ಆರೋಪಿಗೆ ಮರಣ ದಂಡನೆ ವಿಧಿಸಿದ ವಿಶೇಷ ಪೋಸ್ಕೊ ನ್ಯಾಯಾಲಯ

Update: 2021-01-21 10:12 GMT

ಲಕ್ನೊ: ಗಾಝಿಯಾಬಾದ್ ನಲ್ಲಿ ಎಳೆ ಮಗುವಿನ ಮೇಲೆ ಅತ್ಯಾಚಾರ ಎಸಗಿ,ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ದಾಖಲೆಯ ಸಮಯದಲ್ಲಿ ವಿಚಾರಣೆ ನಡೆಸಿದ ವಿಶೇಷ ಪೋಸ್ಕೋ ನ್ಯಾಯಾಲಯವು ಆರೋಪಿಗೆ ಬುಧವಾರ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಘಟನೆಯು ಅಕ್ಟೋಬರ್ 19ಕ್ಕೆ ನಡೆದಿದೆ. ಎರಡೂವರೆ ವರ್ಷದ ಅಪ್ರಾಪ್ತ ಬಾಲಕಿ ಗಾಝಿಯಾಬಾದ್ ನ ಕವಿ ನಗರ ಪ್ರದೇಶದ ರಸ್ತೆಬದಿಯ ಪೊದೆಯಲ್ಲಿ ಕಂಡುಬಂದಿತ್ತು. ಪ್ರಕರಣ ವಿಚಾರಣೆ ಆರಂಭವಾದ ಬಳಿಕ ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಲು 29 ದಿನಗಳನ್ನು ತೆಗೆದುಕೊಂಡಿದೆ.

ವಿಶೇಷ ಪೋಸ್ಕೊ ನ್ಯಾಯಾಲಯದ ನ್ಯಾಯಾಧೀಶ ಮಹೇಂದ್ರ ಶ್ರೀವಾಸ್ತವ ಅವರು ಆರೋಪಿ ಚಂದನ್‍ಗೆ ಮರಣ ದಂಡನೆ ವಿಧಿಸಿದರು. ಆರೋಪಿಯು ಬಾಲಕಿಯ ತಂದೆಯ ಆತ್ಮೀಯ ಸ್ನೇಹಿತನಾಗಿದ್ದ. ತೀರ್ಪು ನೀಡುವ ಮೊದಲು 10 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ದಾಖಲೆ ಸಮಯದಲ್ಲಿ ತೀರ್ಪು ನೀಡಿರುವುದು ಮಹಾನ್ ಸಾಧನೆಯಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಉತ್ಕರ್ಷ್ ಹೇಳಿದ್ದಾರೆ.

ಕೃತ್ಯ ನಡೆದ ತಕ್ಷಣವೇ ಆರೋಪಿಯನ್ನು ಬಂಧಿಸಲಾಗಿತ್ತು. ಡಿ.29ರಂದು ಚಾರ್ಜ್ ಶೀಟ್ ದಾಖಲಿಸಲಾಗಿತ್ತು ಎಂದು ಪೊಲೀಸ್ ಉಪ ಅಧೀಕ್ಷಕ ಅವಿನಾಶ್ ಕುಮಾರ್ ಹೇಳಿದ್ದಾರೆ.

ಅ.19ರಂದು ಸಂತ್ರಸ್ತ ಕುಟುಂಬದವರು ಕವಿನಗರ ಪೊಲೀಸ್ ಠಾಣೆಯಲ್ಲಿ ಮಗು ನಾಪತ್ತೆಯಾಗಿರುವುದಾಗಿ ದೂರು ಸಲ್ಲಿಸಿದ್ದರು. ಕುಟುಂಬ ಸದಸ್ಯರ ಅನುಮಾನದ ಮೇರೆಗೆ ಪೊಲೀಸರು ಚಂದನ್ ಪಾಂಡೆಯನ್ನು ವಿಚಾರಣೆ ನಡೆಸಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News