ಮಂಗಳೂರು: ಬಸ್‌ನಲ್ಲಿ ಕಿರುಕುಳ ನೀಡಿದ ಪ್ರಕರಣ; ಆರೋಪಿ ಸೆರೆ

Update: 2021-01-21 12:22 GMT

ಮಂಗಳೂರು, ಜ.21: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಸಹ ಪ್ರಯಾಣಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿ ಹುಸೈನ್ (41) ಬಂಧಿತ ಆರೋಪಿ.

ಆರೋಪಿಯ ಕುರಿತು ಮಾಹಿತಿ ನೀಡಲು ಪೊಲೀಸ್ ಆಯುಕ್ತರು ನಗರದ ಕಮಿಷನರ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ, ಕಮಿಷನರ್ ಎದುರೇ ಯುವತಿ ಆರೋಪಿಯ ಕೆನ್ನೆಗೆ ಬಾರಿಸಿದ ಘಟನೆಯೂ ನಡೆಯಿತು. ಇದೇ ವೇಳೆ 'Moms Mangalore' ಸಂಘಟನೆಯ ಮುಖ್ಯಸ್ಥೆ ವಿದ್ಯಾ ಕೂಡ ಕಪಾಳ ಮೋಕ್ಷ ಮಾಡಿದರು.

ಜ.14ರಂದು ಯುವತಿ ದೇರಳಕಟ್ಟೆಯಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಆಕೆಯ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಹುಸೈನ್ ಆಕೆಗೆ ಕಿರುಕುಳ ನೀಡಿದ್ದ ಎನ್ನಲಾಗಿದ್ದು, ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ ಮೇಲೆ ಬಸ್ ನಿಂದ ಇಳಿದಿದ್ದ. ನಂತರ ಮತ್ತೊಂದು ಬಸ್‌ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಕಿರುಕುಳ ನೀಡಿದ್ದ. ಈ ವೇಳೆ ಫೋಟೋ ತೆಗೆದು ವೈರಲ್ ಮಾಡೋಡುವುದಾಗಿ ಯುವತಿ ಎಚ್ಚರಿಸಿದ್ದರೂ ಆತ ಚಾಳಿ ಬಿಟ್ಟಿರಲಿಲ್ಲ ಎನ್ನಲಾಗಿದೆ.

ಯುವತಿ ಆತನ ಪೋಟೋ ತೆಗೆದಾಗ ಹುಸೈನ್ ಫೋಟೋಗೆ ನಿರ್ಲಜ್ಜೆಯಿಂದ ಪೋಸ್ ಕೊಟ್ಟಿದ್ದು, ಇದಾದ ಬಳಿಕವೂ ತನ್ನ ಅನುಚಿತ ವರ್ತನೆ ಮುಂದುವರಿಸಿದ್ದ. ಇತರ ಪ್ರಯಾಣಿಕರ ಎದುರೇ ಆರೋಪಿಯು ಯುವತಿಗೆ ಕಿರುಕುಳ ನೀಡಿದರೂ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು ಎಂದು ಯುವತಿ ತಿಳಿಸಿದ್ದು, ಇದರಿಂದ ಬೇಸತ್ತ ಯುವತಿ ಆರೋಪಿಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಇದು ಕೆಲವೇ ಹೊತ್ತಿನಲ್ಲಿ ಭಾರೀ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿ ಬಸ್ ಡ್ರೈವರ್ ಮತ್ತು ನಿರ್ವಾಹಕರಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News