ವಿದ್ಯಾರ್ಥಿ ವೇತನ ದೊರೆಯದೆ ಸಮಸ್ಯೆ: ಸೂಕ್ತ ಕ್ರಮಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ ಒತ್ತಾಯ

Update: 2021-01-21 11:42 GMT

ಮಂಗಳೂರು, ಜ. 21: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಹಾಗೂ ಇಲಾಖೆಗಳಿಂದ ಸಮುದಾಯಕ್ಕೆ ದೊರೆಯುವ ಹಲವಾರು ಸಾಲ ಸೌಲಭ್ಯಗಳು ಹಾಗೂ ವಿದ್ಯಾರ್ಥಿ ವೇತನ ದೊರೆಯದೆ ಸಮಸ್ಯೆಯಾಗಿದ್ದು ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಅಖಿಲ ಭಾರತ ಬ್ಯಾರಿ ಪರಿಷತ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿದ ಪರಿಷತ್‌ನ ಗೌರವ ಕಾರ್ಯದರ್ಶಿ ಯೂಸುಫ್ ವಕ್ತಾರ್, ಇಲಾಖೆ ಹಾಗೂ ನಿಗಮದಿಂದ ನೀಡಲಾಗುವ ವಿದ್ಯಾರ್ಥಿವೇತನಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದೂ ವೇತನ ಮಂಜೂರಾಗಿಲ್ಲ ಎಂದರು.

ಈ ಸಾಲಿನಲ್ಲಿ ಅರಿವು ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ನಿಗಮ ಪ್ರಕಟಣೆಯನ್ನೇ ನೀಡಿಲ್ಲ. ಇದರಿಂದಾಗಿ ಸಾವಿರಾರು ಅಲ್ಪ ಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುವ ಪ್ರಮೇಯ ಎದುರಾಗಿದೆ. ವಿದೇಶದಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಸಾಲ ಯೋಜನೆಗೂ ಈ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಪ್ರಕಟನೆಯೇ ನೀಡಲಾಗಿಲ್ಲ. ಬಡ ಹೆಣ್ಣು ಮಕ್ಕಳ ವಿವಾಹಕ್ಕಾಗಿ ನೀಡಲಾಗುವ 50,000 ರೂ.ಗಳ ಸಹಾಯಧನಕ್ಕೂ ಸದ್ಯ ತಡೆ ನೀಡಲಾಗಿದೆ. ಸರಕಾರ ಆ ತಡೆಯನ್ನು ಹಿಂಪಡೆದು ಸಹಾಯಧನವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಿ ನೀಡಬೇಕು. ಗೃಹ ನಿರ್ಮಾಣಕ್ಕಾಗಿ ಬಿಪಿಎಲ್ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಂಕ್‌ಗಳಿಂದ 5 ಲಕ್ಷ ರೂ. ಸಾಲ ಪಡೆದಲ್ಲಿ 1 ಲಕ್ಷ ರೂ. ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ ಆ ಯೋಜನೆಯಿಂದ ಮುಸ್ಲಿಂ ಸಮುದಾಯದ ಫಲಾನುಭವಿ ಗಳನ್ನು ಕೈಬಿಡಲಾಗಿದೆ. ಯೋಜನೆಯನ್ನು ಮುಸ್ಲಿಂ ಸಮುದಾಯಕ್ಕೂ ಅನ್ವಯಿಸಬೇಕು. ಈ ಹಿಂದೆ ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳು ನವೀಕರಣ ಸಂದರ್ಭದಲ್ಲಿ ಶೇ. 12ರಂತೆ ಬಡ್ಡಿ ಸಹಿತ ಮುಂಗಡ ಹಣ ಪಾವತಿಸಬೇಕಾಗಿರುತ್ತದೆ. ಆದರೆ ಸದ್ಯ ಬಡ ವಿದ್ಯಾರ್ಥಿಗಳಿಗೆ ಈ ಹಣ ಕಟ್ಟಲು ತೊಂದರೆಯಾಗಿದೆ. ನವೀಕರಣ ಮೊತ್ತದ ಚೆಕ್ಕು ನೀಡುವ ಸಂದರ್ಭ ಬಾಕಿ ಕಂತನ್ನು ಕಡಿತಗೊಳಿಸಿ ಉಳಿದ ಹಣವನ್ನು ಚೆಕ್ಕು ಮೂಲಕ ನೀಡಬೇಕು. ಶಿಕ್ಷಣ ಸಾಲದ ಚೆಕ್ಕನ್ನು ಶಿಕ್ಷಣ ಸಂಸ್ಥೆಗೆ ನೀಡದೆ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾಗೊಳಿಸಬೆೀಕು ಎಂದು ಅವರು ಒತ್ತಾಯಿಸಿದರು.

ದ.ಕ. ಜಿಲ್ಲೆಯ ಅಲ್ಪಸಂಖ್ಯಾತ ನಿಗಮ ಕಚೇರಿಯಿ ಖಾಯಂ ಸರಕಾರಿ ನೌಕರರನ್ನು ನೇಮಕಗೊಳಿಸಬೇಕು. ತಮ್ಮ ಬೇಡಿಕೆಗಳ ಕುರಿತಂತೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದ್ದು, ಬೇಡಿಕೆ ಈಡೇರದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿರುವುದಾಗಿ ಅವರು ಹೇಳಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಕೆ.ಎಸ್. ಅಬೂಬಕರ್ ಪಲ್ಲಮಜಲು, ಮುಖ್ಯ ಸಲಹೆಗಾರ ಜೆ. ಹುಸೇನ್ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್, ಕೋಶಾಧಿಕಾರಿ ನಿಸಾರ್ ಎಫ್. ಮುಹಮ್ಮದ್ ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News