ಜಿಲ್ಲಾಧಿಕಾರಿಗೆ ತೇಜಸ್ವಿ ಯಾದವ್ ಅವರ ಫೋನ್ ಕಾಲ್ ವೀಡಿಯೊ ವೈರಲ್

Update: 2021-01-21 12:07 GMT

ಪಾಟ್ನಾ: ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪಾಟ್ನಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಜತೆಗೆ ನಡೆಸಿದ ದೂರವಾಣಿ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಹಾರದಲ್ಲಿ 94,000ಕ್ಕೂ ಅಧಿಕ ಶಿಕ್ಷಕ ಹುದ್ದೆಯ ಅಭ್ಯರ್ಥಿಗಳನ್ನು ಇನ್ನೂ ನೇಮಕಾತಿಗೊಳಿಸದೇ ಇರುವುದರ ವಿರುದ್ಧ ನಗರದ ಇಕೋ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೇಜಸ್ವಿ ಆಗಮಿಸಿದಾಗ ಅಲ್ಲಿ ಪ್ರತಿಭಟಿಸಲು ಅನುಮತಿಯನ್ನು ಆಡಳಿತ ನಿರಾಕರಿಸಿದೆ ಎಂದು ಅಲ್ಲಿದ್ದವರು ತೇಜಸ್ವಿ ಅವರಿಗೆ ತಿಳಿಸಿದರು. ಇದರಿಂದ ಕೋಪಗೊಂಡ ತೇಜಸ್ವಿ ಯಾದವ್ ತಕ್ಷಣ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಅವರಿಗೆ ಸ್ಪೀಕರ್ ಆನ್ ಮಾಡಿ ಫೋನ್ ಮಾಡಿ ಪ್ರತಿಭಟನೆಗೆ ಅನುಮತಿಸುವಂತೆ ಕೋರಿದರು.

ಆಗ ಮ್ಯಾಜಿಸ್ಟ್ರೇಟ್ ತಾವು ಪರಿಶೀಲಿಸುವುದಾಗಿ ತಿಳಿಸಿದಾಗ "ಯಾವಾಗ ಅನುಮತಿ ದೊರಕುತ್ತದೆ?,'' ಎಂದು ತೇಜಸ್ವಿ ಕೇಳಿದರು. "ಯಾವಾಗ ಎಂದರೆ ನೀವು ಇನ್ನೂ ಅಪೀಲು ಸಲ್ಲಿಸಿಲ್ಲ, ಅದಾಗಲೇ ಪ್ರಶ್ನಿಸುತ್ತಿದ್ದೀರಿ,?'' ಎಂದು ಮ್ಯಾಜಿಸ್ಟ್ರೇಟ್ ತಾಳ್ಮೆ ಕಳೆದುಕೊಂಡು ಕೇಳಿದರು.

ಶಾಂತಚಿತ್ತರಾಗಿದ್ದ ತೇಜಸ್ವಿ ಅವರು "ಹಮ್ ತೇಜಸ್ವಿ ಯಾದವ್ ಬೋಲ್ ರಹೇ ಹೈ, ಡಿಎಂ ಸಾಹಬ್,'' ಎಂದರು.  ಅವರ ಈ ಮಾತುಗಳನ್ನು ಕೇಳುತ್ತಲೇ ಡಿಎಂ ವಿನಯದಿಂದ "ಅಚ್ಛಾ ಸರ್, ಸರ್,'' ಎಂದು ಅವರು ಹೇಳುತ್ತಿರುವಂತೆಯೇ ನೆರೆದಿದ್ದವರು ನಗೆಗಡಲಿನಲ್ಲಿ ತೇಲಿದರು.

ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದ ನಂತರ ತೇಜಸ್ವಿ ಅಲ್ಲಿಂದ ಮರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News