ಉಡುಪಿ: ಆ್ಯಪ್ ಮೂಲಕ ಮನೆ ಬಾಗಿಲಿಗೆ ದಿನಸಿ ಸಾಮಗ್ರಿ

Update: 2021-01-21 14:25 GMT

ಉಡುಪಿ, ಜ.21: ಉಡುಪಿಯಲ್ಲಿ ಇನ್ನು ಮುಂದೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ಬರಲಿವೆ. ‘ನಾಮ್ ವೇ’ ಎಂಬ ಡೆಲಿವರಿ ಆ್ಯಪ್ ಈ ಸೇವೆಯನ್ನು ನೀಡಲಿದ್ದು, ಆ್ಯಪ್‌ನ್ನು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದ್ದಾರೆ.

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಲಾದ ‘ನಾಮ್ ವೇ’ ಆ್ಯಪ್ ಲೋಕ ಸಮರ್ಪಣಾ ಕಾರ್ಯಕ್ರಮ ದಲ್ಲಿ ಆ್ಯಪ್‌ನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ ಸ್ವಾಮೀಜಿ ಆ್ಯಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ವೆಬ್ಸೈಟ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಖ್ಯಾತ ತುಳು ಭಾಷಾ ನಟ ಭೋಜರಾಜ್ ವಾಮಂಜೂರು, ರಾಘವೇಂದ್ರ ಕಿಣಿ, ಉಡುಪಿ ನಗರ ಠಾಣೆಯ ಪೊಲೀಸ್ ಸಬ್ಇನ್‌ಸ್ಪೆಕ್ಟರ್ ಶಕ್ತಿವೇಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

‘ನಾಮ್ ವೇ’ ಅಗತ್ಯ ವಸ್ತುಗಳ ಡೆಲಿವರಿ ಆ್ಯಪ್‌ನ ಸಿಇಓ ಶ್ರೀಶ ವಿ.ಎಸ್ ಆ್ಯಪ್‌ನ ಸೇವೆಗಳ ಬಗ್ಗೆ ತಿಳಿಸಿದರು. ಉಡುಪಿ ನಗರದ 10 ಕಿ.ಮೀ ವ್ಯಾಪ್ತಿಯಲ್ಲಿ ಈ ಆ್ಯಪ್‌ನ ಸೇವೆ ಜನರಿಗೆ ಲಭ್ಯವಾಗಲಿದ್ದು, ಮೊಬೈಲ್ ಮೂಲಕ ಪ್ಲೇ ಸ್ಟೋರ್‌ನಿಂದ ನಾಮ್ ವೇ ಆ್ಯಪ್‌ನ್ನು ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ಔಷಧಿ ವಸ್ತುಗಳು, ಆಹಾರವಸ್ತುಗಳು, ದಿನಸಿ ಸೇರಿದಂತೆ ಇತರೇ ಅಗತ್ಯ ವಸ್ತುಗಳನ್ನು ಕುಳಿತಲ್ಲೇ ಆರ್ಡರ್ ಮಾಡಿ ಮನೆ ಬಾಗಿಲಿಗೆ ಈ ಆ್ಯಪ್ ಮೂಲಕ ತರಿಸಿಕೊಳ್ಳಬಹುದು ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News