ಕೋವಿಡ್ ಲಸಿಕೆಗಳು ಸಂಪೂರ್ಣ ಸುರಕ್ಷಿತ, ವದಂತಿ ನಿರ್ಲಕ್ಷಿಸಿ: ಕೇಂದ್ರ ಆರೋಗ್ಯ ಸಚಿವ

Update: 2021-01-21 14:36 GMT

ಹೊಸದಿಲ್ಲಿ, ಜ. 21: ಕೋವಿಡ್ ಲಸಿಕೆಗಳು ಸಂಪೂರ್ಣ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿರುವುದರಿಂದ ಅದರ ಬಗ್ಗೆ ಹರಡುವ ವದಂತಿ ಹಾಗೂ ತಪ್ಪು ಮಾಹಿತಿಯನ್ನು ನಿರ್ಲಕ್ಷಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಿಂಗ್ ಹೇಳಿದ್ದಾರೆ.

‘‘ಕೋವಿಶೀಲ್ಡ್ (ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ) ಹಾಗೂ ಕೋವ್ಯಾಕ್ಸಿನ್ (ಭಾರತ್‌ಬಯೋಟೆಕ್ ಉತ್ಪಾದನೆ) ಲಸಿಕೆಗಳು ಬಳಕೆಗೆ ಸುರಕ್ಷಿತ. ತಥಾಕಥಿತ ಅಡ್ಡ ಪರಿಣಾಮಗಳು ಯಾವುದೇ ಲಸಿಕೆ ಪಡೆದುಕೊಳ್ಳುವ ಪ್ರಕ್ರಿಯೆ ಸಂದರ್ಭ ಸಹಜ. ಲಸಿಕೆ ಪಡೆದುಕೊಂಡ ಬಳಿಕ ಬಾವು ಹಾಗೂ ಲಘು ಜ್ವರ ಬಂದಿರುವುದು ನಮ್ಮಲ್ಲಿ ಹಲವರಿಗೆ ನೆನಪಿರಬಹುದು. ಇದು ಸಾಮಾನ್ಯ’’ ಎಂದು ಕೋವಿಡ್-19 ಲಸಿಕೆ ಪಡೆದುಕೊಳ್ಳಲು ಹಿಂಜರಿಯುತ್ತಿರುವುದಕ್ಕೆ ಸಂಬಂಧಿಸಿದ ಅನುಮಾನಗಳನ್ನು ಪರಿಹರಿಸಲು ಆರೋಗ್ಯ ಸಚಿವಾಲಯ ಸಿದ್ಧಪಡಿಸಿದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಹರ್ಷವರ್ಧನ್ ಹೇಳಿದರು.

ಪೋಸ್ಟರ್‌ಗಳು ಕೋವಿಡ್ ವ್ಯಾಕ್ಸಿನ್‌ಗಳಿಗೆ ಸಂಬಂಧಿಸಿದ ಯಾವುದೇ ಸಂಶಯಗಳನ್ನು ನಿವಾರಿಸುವ ಹಾಗೂ ಜನರು ಈ ವಾಸ್ತವವನ್ನು ಸಾಮೂಹಿಕ ಪ್ರಚಾರ ನಡೆಸುವಂತೆ ಆಗ್ರಹಿಸುವ ಉದ್ದೇಶವನ್ನು ಹೊಂದಿದೆ. ಹಲವು ದೇಶಗಳಲ್ಲಿ ಭಾರತದ ಲಸಿಕೆಗೆ ಬೇಡಿಕೆ ಹೆಚ್ಚುತ್ತಿದೆ. ಈ ಲಸಿಕೆಯ ಪರಿಣಾಮದ ಬಗ್ಗೆ ಹಲವು ಜನರು ತಪ್ಪು ವದಂತಿ ಹಾಗೂ ಮಾಹಿತಿಯನ್ನು ಹರಡುತ್ತಿದ್ದಾರೆ. ನೀವು ಇದನ್ನು ನಂಬಬೇಡಿ ಎಂದು ನಾನು ನಿಮ್ಮನ್ನು ಆಗ್ರಹಿಸುತ್ತೇನೆ ಎಂದು ಅವರು ಹೇಳಿದರು.

ವೈದ್ಯರು, ವಿಜ್ಞಾನಿಗಳು ಹಾಗೂ ವೈದ್ಯಕೀಯ ತಜ್ಞರಿಗೆ ಕೃತಜ್ಞತೆ ಸಲ್ಲಿಸಿದ ಹರ್ಷವರ್ಧನ್, ‘‘ಈ ಲಸಿಕೆ ನೀಡಿಕೆ ಅಭಿಯಾನ ಆರೋಗ್ಯ ಕ್ಷೇತ್ರದ ಕನ್ನಡಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಪೋಲಿಯೊ, ಸಿಡುಬಿನಂತಹ ಮಾರಣಾಂತಿಕ ರೋಗಗಳನ್ನು ಭಾರತ ಯಶಸ್ವಿಯಾಗಿ ನಿರ್ಮೂಲನಗೊಳಿಸಿದೆ. ಇದೇ ರೀತಿ, ಇಂದು ನಾವು ಕೋವಿಡ್‌ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುತ್ತಿದ್ದೇವೆ ಎಂದು ಭಾವಿಸಿದ್ದೇವೆ’’ ಎಂದು ಅವರು ಹೇಳಿದರು. ‘‘ಜನವರಿ ತಿಂಗಳಲ್ಲಿ, ನಾವು ತೃಪ್ತಿಕರವಾಗಿ ಕೆಲಸ ಮಾಡಿದ್ದೇವೆ ಎಂಬುದು ನನ್ನ ಭಾವನೆ. ಯಾವುದೇ ನಿರ್ಲಕ್ಷ್ಯ ವಹಿಸದ ತಮ್ಮ ರೋಗಿಗಳನ್ನು ರಕ್ಷಿಸಲು ಎಲ್ಲ ವೈದ್ಯರು ಹಾಗೂ ಮುಂಚೂಣಿ ಕಾರ್ಯಕರ್ತರು ನಿರಂತರ ಕಾರ್ಯ ನಿರ್ವಹಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News