ರಾಜೀವ್ ಗಾಂಧಿ ಹಂತಕರ ಬಿಡುಗಡೆ ಬಗ್ಗೆ 3-4 ದಿನಗಳಲ್ಲಿ ರಾಜ್ಯಪಾಲರ ನಿರ್ಧಾರ:ಸುಪ್ರೀಂ ಕೋರ್ಟ್‌ಗೆ ಮಾಹಿತಿ

Update: 2021-01-21 15:07 GMT

ಹೊಸದಿಲ್ಲಿ,ಜ.21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಜನರ ಬಿಡುಗಡೆಯ ಕುರಿತು ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ ಪುರೋಹಿತ್ ಅವರು 3-4 ದಿನಗಳಲ್ಲಿ ನಿರ್ಧಾರವೊಂದನ್ನು ಕೈಗೊಳ್ಳಲಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೂ ಮುನ್ನ,ದೋಷಿಗಳ ಬಿಡುಗಡೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಲಯವು ರಾಜ್ಯಪಾಲರ ಮಂದಗತಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

2018ರಲ್ಲಿ ತಮಿಳುನಾಡು ಸರಕಾರವು 1991ರ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿಯ ಎಲ್ಲ ಏಳೂ ದೋಷಿಗಳ ಅವಧಿಪೂರ್ವ ಬಿಡುಗಡೆಗೆ ಶಿಫಾರಸು ಮಾಡಿತ್ತು. ಆದರೆ ಸಂಪುಟದ ನಿರ್ಧಾರಕ್ಕೆ ರಾಜ್ಯಪಾಲರ ಅಂಕಿತ ಅಗತ್ಯವಾಗಿದ್ದು,ಆಗಿನಿಂದಲೂ ಈ ಶಿಫಾರಸು ಅವರ ಬಳಿ ಬಾಕಿಯಾಗಿದೆ. ಮಲ್ಟಿಡಿಸಿಪ್ಲಿನರಿ ಮಾನಿಟರಿಂಗ್ ಏಜೆನ್ಸಿ (ಎಂಡಿಎಂಎ)ಯ ತನಿಖೆ ಪೂರ್ಣಗೊಳ್ಳುವವರೆಗೆ ಜೈಲಿನಿಂದ ಬಿಡುಗಡೆಗೊಳಿಸುವಂತೆ ದೋಷಿಗಳ ಪೈಕಿ ಎ.ಜಿ.ಪೆರಾರಿವೇಲನ್ 2016ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದ.

ರಾಜೀವ್ ಗಾಂಧಿ ಹತ್ಯೆ ಹಿಂದಿನ ವ್ಯಾಪಕ ಪಿತೂರಿಯ ಬಗ್ಗೆ ತಾನಿನ್ನೂ ತನಿಖೆ ನಡೆಸುತ್ತಿರುವುದಾಗಿ ಎಂಡಿಎಂಎ ಭಾಗವಾಗಿರುವ ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

‘ಈ ಹಂತದಲ್ಲಿ ನಮ್ಮ ಅಧಿಕಾರವನ್ನು ಚಲಾಯಿಸಲು ನಾವು ಬಯಸುವುದಿಲ್ಲ,ಆದರೆ ಸರಕಾರವು ಮಾಡಿರುವ ಶಿಫಾರಸು ಎರಡು ವರ್ಷಗಳಿಂದಲೂ ಬಾಕಿಯುಳಿದಿರುವುದು ನಮಗೆ ಅಸಮಾಧಾನವನ್ನುಂಟು ಮಾಡಿದೆ ’ಎಂದು ನ್ಯಾಯಾಲಯವು ಪ್ರತಿಕ್ರಿಯಿಸಿತ್ತು.

ಈ ಎಲ್ಲ ವರ್ಷಗಳಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕೇಂದ್ರ ಸರಕಾರವು ದೋಷಿಗಳ ಬಿಡುಗಡೆಯನ್ನು ವಿರೋಧಿಸುತ್ತಲೇ ಬಂದಿದೆ.

ರಾಜೀವ್ ಹಂತಕರಾದ ಮುರುಗನ್,ಸಂತಾನಂ,ನಳಿನಿ ಶ್ರೀಹರನ್,ರಾಬರ್ಟ್ ಪಾಯಸ್,ಜಯಕುಮಾರ ಮತ್ತು ರವಿಚಂದ್ರನ್ ತಮಿಳುನಾಡಿನ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News