ನಿವೃತ್ತ ಪೊಲೀಸ್ ಪೇದೆಯಿಂದಲೇ ಬಡವರ ಕುಮ್ಕಿ ಜಮೀನು ಅತಿಕ್ರಮಣ ಆರೋಪ : ದೂರು

Update: 2021-01-21 16:21 GMT

ಉಡುಪಿ, ಜ.21: ಹಿರಿಯಡ್ಕ ಸಮೀಪದ ಕೋಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಣಂಕಿಲ ಗ್ರಾಮದಲ್ಲಿ ನಿವೃತ್ತ ಪೊಲೀಸ್ ಪೇದೆಯೊಬ್ಬರು ಬಡವರ ಬಳಕೆಯಲ್ಲಿದ್ದ ಕುಮ್ಕಿ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೆರ್ಣಂಕಿಲ ಗ್ರಾಮದ ಉಮೇಶ್ ನಾಯಕ್ ಎಂಬವರು ದಲ್ಲಾಳಿಯಾಗಿ ಸರ್ವೆ ನಂಬರ್ 129ರಲ್ಲಿ 3 ಎಕರೆ 84 ಸೆನ್ಸ್ ಜಮೀನನ್ನು ನಿವೃತ್ತ ಪೊಲೀಸ್ ಪೇದೆ ಜನಾರ್ದನ ನಾಯಕ್ ಎಂಬವರಿಗೆ ಮೂರು ತಿಂಗಳ ಹಿಂದೆ ಮಾರಾಟ ಮಾಡಿದ್ದರು. ಇದೀಗ ಈ ಜಾಗದ ಪಕ್ಕದಲ್ಲಿರುವ 10 ಮಂದಿ ರೈತರು ಬಳಸುವ ಸುಮಾರು ಮೂರು ಎಕರೆ ಕುಮ್ಕಿ ಜಾಗವನ್ನು ದಲಾಳ್ಳಿ ಮತ್ತು ನಿವೃತ್ತ ಪೊಲೀಸ್ ಪೇದೆ ಜನಾರ್ದನ ನಾಯಕ್ ಇಬ್ಬರು ಸೇರಿ ಬೇಲಿ ಹಾಕುವ ಮೂಲಕ ಅತಿಕ್ರಮಣ ಮಾಡಿದ್ದಾರೆ ಎಂದು ಕೋಡಿಬೆಟ್ಟು ಗ್ರಾಪಂ ಸದಸ್ಯರಾದ ಸದಾನಂದ ಪ್ರಭು ನೇತೃತ್ವದಲ್ಲಿ ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಈಗ ಆಕ್ರಮಿತ ಜಾಗವು ರೈತರಿಗೆ ಕೃಷಿ ಸಂಬಂಧ ಚಟುವಟಿಕೆಗೆ -ತರಗೆಲೆ, ಕಟ್ಟಿಗೆ, ಗೊಬ್ಬರಕ್ಕೆ- ಸರಕಾರ ಕೊಟ್ಟಂತಹ ಜಾಗವಾಗಿದೆ. ಈ ಜಾಗದಲ್ಲಿ ರೈತರು ಗೇರು, ಮಾವು, ಹಲಸು, ಇನ್ನಿತರ ಫಲವಸ್ತುಗಳನ್ನು ಹಾಕಿಕೊಂಡಿದ್ದು ಅಕ್ರಮ ಸಕ್ರಮ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇದೀಗ ಈ ಇಬ್ಬರು ಸೇರಿಕೊಂಡು ಜಾಗವನ್ನು ಕಬಳಿಸಿ ಜೆಸಿಬಿ ಮೂಲಕ ಸಮತಟ್ಟು ಮಾಡುತಿದ್ದಾರೆ. ಇದನ್ನು ಪ್ರಶ್ನಿಸಿದರೆ ಧಮಕಿ ಹಾಕುತ್ತಾರೆ ಎಂದು ಆಸುಪಾಸಿನ ಕೃಷಿಕರು ಹೇಳಿದ್ದಾರೆ.

ಅಕ್ರಮಿತ ಜಾಗದಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ಬೆಳೆಬಾಳುವ ಮರಗಳಿದ್ದು, ಅಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಿ ಸುಮಾರು 500 ಲೋಡ್ ಪಾದೆಕಲ್ಲನ್ನು ಮಾರಾಟ ಸಹ ಮಾಡಿದ್ದಾರೆ. ಅಲ್ಲದೇ ಅನಾದಿ ಕಾಲದಿಂದ ಇದ್ದ ಕಾಲುದಾರಿ, ಕಚ್ಚಾರಸ್ತೆಗಳನ್ನು ಮುಚ್ಚಿ ಜಾಗಕ್ಕೆ ಹೋಗಲು ಅವಕಾಶ ವಿಲ್ಲದಂತೆ ಮಾಡಿದ್ದಾರೆ ಎಂದವರು ದೂರಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳು, ಶಾಸಕ ಲಾಲಾಜಿ ಮೆಂಡನ್, ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಹಶೀಲ್ದಾರ್, ಗ್ರಾಪಂ ಹಾಗೂ ಪೊಲೀಸರಿಗೆ ದೂರು ನೀಡಿದ್ದೇವೆ. ತಮಗೆ ನ್ಯಾಯ ಕೊಡಿಸಿ ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News