ವರವರ ರಾವ್ ಬಿಡುಗಡೆಗೆ ಇಸ್ರೇಲಿ ಕವಿಗಳ ಆಗ್ರಹ

Update: 2021-01-21 18:01 GMT

ವಾಶಿಂಗ್ಟನ್,ಜ.21: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಖ್ಯಾತ ಕವಿ ಹಾಗೂ ಸಾಮಾಜಿಕ ಹೋರಾಟಗಾರ ಡಾ. ವರವರ ರಾವ್ ಅವರನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಇಸ್ರೇಲ್‌ನ ಕವಿಗಳ ಗುಂಪೊಂದು,ಇಸ್ರೇಲ್‌ನಲ್ಲಿನ ಭಾರತದ ರಾಯಭಾರಿ ಸಂಜೀವ್ ಕುಮಾರ್ ಸಿಂಗ್ಲಾ ಅವರಿಗೆ ಪತ್ರವೊಂದನ್ನು ಕಳುಹಿಸಿದೆ.

  ತನ್ನ ದಶಕಗಳ ಸಾಧನೆ ಹಾಗೂ ಧಾರ್ಮಿಕ ಸಂಪ್ರದಾಯವಾದ, ತಾರತಮ್ಯವಾದಿ ಜಾತಿ ವ್ಯವಸ್ಥೆ, ಮಹಿಳೆಯರ ಮೇಲೆ ದಬ್ಬಾಳಿಕೆ ಹಾಗೂ ಭಾರತದಾದ್ಯಂತ ನವಉದಾರೀಕರಣದ ಬೆಳವಣಿಗೆಯನ್ನು ದಿಟ್ಟತನ ಹಾಗೂ ದೃಢತೆಯಿಂದ ಎದುರಿಸುವ ಮೂಲಕ ವರವರ ರಾವ್ ಅವರು ಹಲವರಿಗೆ ಸ್ಫೂರ್ತಿಯಾಗಿದ್ದಾರೆಂದು ಅವರು ಹೇಳಿದರು.

 ''ಡಾ.ವರವರ ರಾವ್ ಅವರ ಬಂಧನವು, ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಾನವನ್ನು ಕಡಿಮೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯು ಕೈಗೊಂಡಿರುವ ಕ್ರಮಗಳ ಅವಿಭಾಜ್ಯ ಅಂಗವಾಗಿದೆ. ಪತ್ರಕರ್ತರ, ಮಾನವಹಕ್ಕು ಹೋರಾಟಗಾರರ, ವಿಮರ್ಶಕ ರಾಜಕಾರಣಿಗಳ, ಪೌರರ ಮತ್ತು ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ನಡೆಸಲಾಗುತ್ತಿರುವ ರಾಜಕೀಯ ಪೀಡನೆ ಹಾಗೂ ದೋಷಾರೋಪಣೆಯ ಭಾಗವಾಗಿದೆ. ಭಾರತದಲ್ಲಿನ ಪರಿಸ್ಥಿತಿ ಹದಗೆಡುವುದು ಮುಂದುವರಿಯಲಿದೆ ಹಾಗೂ 1970ರ ಮಧ್ಯಂತರದಲ್ಲಿನ ಇಂದಿರಾಗಾಂಧಿಯವರ ತುರ್ತುಸ್ಥಿತಿ ಆಳ್ವಿಕೆಯ ಯುಗಕ್ಕೆ ಮರಳಲಿದೆ ಎಂಬ ನೈಜ ಭೀತಿಯುಂಟಾಗಿದೆ'' ಎಂದು ಇಸ್ರೇಲಿ ಕವಿಗಳು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News