ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ರ‍್ಯಾಗಿಂಗ್; ಆರೋಪಿತ 9 ವಿದ್ಯಾರ್ಥಿಗಳ ಬಂಧನ: ಕಮಿಶನರ್

Update: 2021-01-22 10:56 GMT

ಮಂಗಳೂರು : ನಗರ ಹೊರವಲಯದ ವಳಚ್ಚಿಲ್‌ ಶ್ರೀನಿವಾಸ್ ಕಾಲೇಜಿನ ಕಿರಿಯ ವಿದ್ಯಾರ್ಥಿಯೋರ್ವನಿಗೆ ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ 9 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಶ್ರೀನಿವಾಸ್ ಕಾಲೇಜಿನ ಮೊದಲ ವರ್ಷದ ಬಿ- ಫಾರ್ಮಾ ಕಲಿಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ರ‍್ಯಾಗಿಂಗ್ ಗೆ ಒಳಗಾಗಿದ್ದು, ಅದೇ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ. ಆರೋಪಿಗಳೆಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿ ತೃತೀಯ ಬಿ ಫಾರ್ಮಾದ ಜಿಷ್ಣು(20), ಶ್ರೀಕಾಂತ ಪಿ.ವಿ. (20), ಅಶ್ವಂತ್ (20), ಸಯಂತ್ (22), ಅಭಿರತ್ ರಾಜೀವ್ (21), ದ್ವಿತೀಯ ಬಿ ಫಾರ್ಮಾದ ರಾಹುಲ್ ಪಿ. (21), ಜಿಷ್ಣು (20), ಮುಕ್ತಾರ್ ಅಲಿ (19), ಮುಹಮ್ಮದ್ ರಝೀಮ್ ಕೆ. (20) ಎಂಬವರನ್ನು ಬಂಧಿಸಲಾಗಿದೆ ಎಂದು ಕಮಿಶನರ್ ವಿವರಿಸಿದರು.

 ಜ.10ರಂದು ತರಗತಿ ಮುಗಿಸಿ ಅಪರಾಹ್ನ 2 ಗಂಟೆಗೆ ತನ್ನ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಹಿರಿಯ ಈ ಆರೋಪಿತ ವಿದ್ಯಾರ್ಥಿಗಳು ತಲೆಕೂದಲು ಹಾಗೂ ಮೀಸೆ ತೆಗೆಸಿ ಬರುವಂತೆ ಗದರಿಸಿದ್ದಲ್ಲದೆ, ಓರ್ವ ಕೆನ್ನೆಗೆ ಬಾರಿಸಿದ್ದಾನೆ. ನಂತರ ಜ. 12ರಂದು ಅಪರಾಹ್ನ ಅದೇ ವಿದ್ಯಾರ್ಥಿಗಳು ಮೀಸೆ ಹಾಗೂ ತಲೆ ಕೂದಲು ತೆಗೆಯದೆ ಬಂದ ಕಾರಣ ಬೈದು, ಮೀಸೆ ತಲೆ ಕೂದಲು ತೆಗೆಯದಿದ್ದರೆ ತಾವೇ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾಗಿ ರ‍್ಯಾಗಿಂಗ್ಗೆ ಒಳಗಾದ ವಿದ್ಯಾರ್ಥಿ ಪೊಲೀಸ್ ದೂರು ನೀಡಿದ್ದನು. ಈ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರ‍್ಯಾಗಿಂಗ್‌ಗೆ ಒಳಗಾಗಿರುವ ವಿದ್ಯಾರ್ಥಿಯನ್ನು ಸುಮಾರು 2 ಲಕ್ಷ ರೂ. ಶುಲ್ಕ ಪಾವತಿಸಿ ಕಾಲೇಜಿಗೆ ದಾಖಲಿಸಲಾಗಿತ್ತು. ಈ ಕಿರಿಯ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ಪಿಜಿಗೆ ಕರೆಸಿಕೊಂಡು ಅನುಚಿತವಾಗಿ ನಡೆಸಿಕೊಂಡು ಹಲ್ಲೆ ನಡೆಸಿರುವ ಸಂದರ್ಭ ಅವನ ಜತೆ ಇತರ ನಾಲ್ವರು ಕಿರಿಯ ವಿದ್ಯಾರ್ಥಿಗಳನ್ನೂ ರ‍್ಯಾಗಿಂಗ್‌ಗೆ ಒಳಪಡಿಸಿದ್ದಾರೆಂದು ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದವರು ಹೇಳಿದರು.

ಈ ಪ್ರಕರಣದಲ್ಲಿ ವಿದ್ಯಾರ್ಥಿ ಪೋಷಕರು ಡಿಸಿಪಿಗೆ ಕರೆ ಮಾಡಿ ತಮ್ಮ ಮಗ ಏಕಾಏಕಿ ಕಾಲೇಜು ಬಿಟ್ಟು ಬಂದಿದ್ದು, ಮತ್ತೆ ಹೋಗಲು ಹಿಂಜರಿಯುತ್ತಿದ್ದಾನೆ. ಆತನು ಹಾಸ್ಟೆಲ್ ಶಿಕ್ಷಣಕ್ಕಾಗಿ ಪಾವತಿಸಿರುವ 2 ಲಕ್ಷ ರೂ. ವಾಪಸ್ ಕೊಡಿಸುವಲ್ಲಿ ಸಹಕರಿಸುವಂತೆಯೂ ಕೋರಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ವಿದ್ಯಾರ್ಥಿಗಳಿಗೆ ಐದಾರು ದಿನಗ ಕಾಲ ರ್ಯಾಗಿಂಗ್ ನಡೆಸಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.


ರ‍್ಯಾಗಿಂಗ್ ವಿರುದ್ಧ ಎಚ್ಚರಿಕೆ

ಶಿಕ್ಷಣ ಕಾಶಿಯೆಂದೇ ಕರೆಸಲ್ಪಡುವ ನಗರದ ಕಾಲೇಜುಗಳಲ್ಲಿ ರ‍್ಯಾಗಿಂಗ್ ನಡೆಯದಂತೆ ಆಯಾ ಶಿಕ್ಷಣ ಸಂಸ್ಥೆಗಳೇ ಎಚ್ಚರಿಕೆ ವಹಿಸಬೇಕು. ತಮ್ಮ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಅವರ ಸುರಕ್ಷತೆಯನ್ನು ಖಾತರಿಪಡಿಸಬೇಕು. ಹಿರಿಯ ವಿದ್ಯಾರ್ಥಿಗಳು ಕೂಡಾ ಕಿರಿಯ ವಿದ್ಯಾರ್ಥಿಗಳೊಂದಿಗೆ ಸಹೋದರರಂತೆ ವರ್ತಿಸಬೇಕು.ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳು ಯಾವುದೇ ರೀತಿಯ ಅಸಹಾಯಕತೆ ಪ್ರದರ್ಶಿಸಿದರೆ, ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿನ ರ‍್ಯಾಗಿಂಗ್ ವಿರೋಧಿ ಸಮಿತಿಗಳ ಮೂಲಕ ಕಿರಿಯ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ನಡೆಸಬೇಕು. ಈ ರೀತಿಯ ರ‍್ಯಾಗಿಂಗ್ ಪ್ರಕರಣಗಳು ನಡೆದರೆ ಅದಕ್ಕೆ ಸಂಸ್ಥೆಗಳೂ ಜವಾಬ್ದಾರಿಯಾಗುತ್ತವೆ. ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳ ಮೇಲೆ ಕಿರುಕುಳ ನಡೆದಾಗ ದೂರು ನೀಡಲು ಹಿಂಜರಿಯುತ್ತಾರೆ. ಹಾಗಾಗಿ ತಮ್ಮ ಸಂಸ್ಥೆಗೆ ದಾಖಲಾದ ವಿದ್ಯಾರ್ಥಿಗಳ ಸುರಕ್ಷತೆ ಕಾಯ್ದುಕೊಳ್ಳುವುದು ಆಯಾ ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಈ ತೆರನಾದ ದೂರುಗಳು ಬಂದಾಗ ಹಾಸ್ಟೆಲ್ ವಾರ್ಡನ್‌ಗಳು ಅಥವಾ ಕಾಲೇಜಿನ ಪ್ರಾಂಶುಪಾಲರು ತಮಗೆ ದೂರು ಬಂದಿಲ್ಲ ಎಂಬ ಉಡಾಫೆಯ ಉತ್ತರ ನೀಡದೆ ಅಗತ್ಯ ಶಿಸ್ತು ಕ್ರಮಗಳನ್ನು ಅನುಸರಿಸಬೇಕು ಎಂದವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News