ಪ್ರತ್ಯೇಕ ಪ್ರಕರಣಗಳಲ್ಲಿ 44 ಕೆಜಿ ಗಾಂಜಾ ವಶ, 7 ಆರೋಪಿಗಳ ಸೆರೆ

Update: 2021-01-22 09:44 GMT

ಮಂಗಳೂರು, ಜ.22: ಕೊಣಾಜೆ ಹಾಗೂ ಉಳ್ಳಾಲದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಗರಕ್ಕೆ ಬೀದರ್ ಹಾಗೂ ತೆಲಂಗಾಣದಿಂದ ಸಾಗಾಟ ಮಾಡಲಾಗುತ್ತಿದ್ದ 44.630 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು, ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. 

ತನ್ನ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಶಪಡಿಸಿಕೊಳ್ಳಲಾದ ಗಾಂಜಾ ವೌಲ್ಯದ 9.75 ಲಕ್ಷ ರೂ.ಗಳಾಗಿದೆ. ಇದರೊಂದಿಗೆ 2 ಕಾರು, ದ್ವಿಚಕ್ರ ವಾಹನ ಮೊಬೈಲ್ ಫೋನ್‌ಗಳು ಸೇರಿ ಒಟ್ಟು  23.25 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಬಂಟ್ವಾಳದ ಅಬ್ದುಲ್ ಅಝೀಝ್ ಯಾನೆ ಫೋಕರ್ ಅಝೀಝ್(40), ಮೊಯ್ದಿನ್ ಹಫೀಝ್ ಯಾನೆ ಅಬಿ (34), ತೆಲಂಗಾಣದ ವಿಠಲ್ ಚೌಹಾಣ್ (35), ಬೀದರ್‌ನ ಸಂಜುಕುಮಾರ್ ಯಾನೆ ಸಂಜು (34), ಕಲ್ಲಪ್ಪ (40), ಬಂಟ್ವಾಳದ ಮುಹಮ್ಮದ್ ಹಫೀಝ್ ಯಾನೆ ಅಪ್ಪಿ (23) ಮತ್ತು ಸಂದೀಪ್ (34) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರ ಪೈಕಿ ಅಬ್ದುಲ್ ಅಝೀಝ್ ವಿರುದ್ಧ ಕೊಣಾಜೆ ಠಾಣೆಯಲ್ಲಿ 3 ಗಾಂಜಾ ಪ್ರಕರಣಗಳು, ಕಾವೂರು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತಲಾ ಒಂದರಂತೆ ಪ್ರಕರಣಗಳು ದಾಖಲಾಗಿವೆ. ಮೊಯ್ದಿನ್ ಹಫೀಝ್ ವಿರುದ್ಧ ಈ ಹಿಂದೆ ಕೊಣಾಜೆಯಲ್ಲಿ ಮೂರು, ಸುರತ್ಕಲ್, ಉಳ್ಳಾಲ, ಕಂಕನಾಡಿಯಲ್ಲಿ ತಲಾ ಒಂದರಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಈತನಿಗೆ ಈ ಹಿಂದೆ ಕೊಣಾಜೆ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಕೂಡಾ ವಿಧಿಸಿರುತ್ತದೆ. ಆರೋಪಿ ಸಂಜೀವ್ ಕುಮಾರ್ ಹಾಗೂ ಕಲ್ಲಪ್ಪ ವಿರುದ್ಧ ಆಂಧ್ರ ಪ್ರದೇಶದಲ್ಲಿ ಗಾಂಜಾ ಪ್ರಕರಣ ದಾಖಲಾಗಿರುತ್ತದೆ. ವಿಠಲ್ ಚೌಹಾಣ್ ವಿರುದ್ಧ ಆಂಧ್ರ ಪ್ರದೇಶದ ಮನೂರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ವಿವರಿಸಿದರು.

ಶಾಲಾ ಕಾಲೇಜು ಸಮೀಪದ ಅಂಗಡಿಗಳಿಗೆ ಗಾಂಜಾ ಬಿಡಿಯಾಗಿ ಪೂರೈಕೆ
ಬಂಧಿತ ಆರೋಪಿಗಳೆಲ್ಲರೂ ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದು, ಭಾರೀ ಪ್ರಮಾಣದಲ್ಲಿ ತಂದ ಗಾಂಜಾವನ್ನು ನಗರದ ಶೈಕ್ಷಣಿಕ ಕೇಂದ್ರಗಳು, ನಗರಸಭೆ, ಪುರಸಭೆ ವ್ಯಾಪ್ತಿಯ ಅಂಗಡಿಗಳಿಗೆ ಬಿಡಿಯಾಗಿ (ಗ್ರಾಂ ಲೆಕ್ಕದಲ್ಲಿ) ನೀಡುವ ಯೋಜನೆ ಹೊಂದಿದ್ದರು. ಇವರಿಂದ ಗಾಂಜಾ ಪಡೆದು ಪೂರೈಕೆ ಮಾಡುತ್ತಿದ್ದವರನ್ನು, ಸೇವಿಸುವವರನ್ನು ತನಿಖೆ ನಡೆಸಿ, ವೈದ್ಯಕೀಯ ತಪಾಸಣೆಗೊಳಪಡಿಸಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News