ಉಡುಪಿ: ಗಣರಾಜ್ಯೋತ್ಸವಕ್ಕೆ ಸಚಿವ ಎಸ್.ಅಂಗಾರರಿಂದ ಧ್ವಜಾರೋಹಣ

Update: 2021-01-22 13:39 GMT

ಉಡುಪಿ, ಜ.22: ರಾಜ್ಯದ ನೂತನ ಮೀನುಗಾರಿಕೆ, ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಉಡುಪಿಯಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಜ.26ರ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸುವ ಸಚಿವರ ಯಾದಿಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಇಂದು ಪ್ರಕಟಿಸಿದ್ದಾರೆ.

ಪ್ರಸ್ತುತ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಅವರು ಹಾವೇರಿಯಲ್ಲಿ ಧ್ವಜಾರೋಹಣ ನೆರವೇರಿಸುವರು.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಆರು ಬಾರಿಯ ಶಾಸಕರಾಗಿದ್ದು, ಇದೇ ಮೊದಲ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಎಸ್.ಅಂಗಾರ ಅವರು ಜ.26 ರಂದು ಉಡುಪಿ ಜಿಲ್ಲಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲು ನೇಮಕಗೊಳ್ಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆಗೆ ಒತ್ತು ನೀಡಿದಂತಾಗಿದೆ.

ಬಸವರಾಜ ಬೊಮ್ಮಾಯಿ ಬಿಜೆಪಿ ಸರಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದರೂ, ಜಿಲ್ಲೆಗೆ ಅವರು ಗಗನಕುಸುಮದಂತೆ ಆಗಿದ್ದಾರೆ. ಸುಮಾರು ಒಂದೂವರೆ ವರ್ಷದಲ್ಲಿ ಅವರು ಕೈಬೆರಳೆಣಿಕೆ ಬಾರಿ ಉಡುಪಿಗೆ ಆಗಮಿಸಿ ಒಂದೇ ದಿನದಲ್ಲಿ ನಿರ್ಗಮಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News