ಹಲಾಲ್ ಮಾಂಸದ ಕುರಿತು ದಿಲ್ಲಿ ಮನಪಾದ ಆದೇಶ: ಕಂಗೆಟ್ಟ ರೆಸ್ಟೋರೆಂಟ್ ಮಾಲಕರು

Update: 2021-01-22 13:53 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.22: ರೆಸ್ಟೋರಂಟ್‌ಗಳಲ್ಲಿ ಗ್ರಾಹಕರಿಗೆ ಒದಗಿಸುವ ಮಾಂಸವು ಹಲಾಲ್ ಅಥವಾ ಝಟ್ಕಾ ಎನ್ನುವುದನ್ನು ಎದ್ದು ಕಾಣುವಂತೆ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿರುವ ದಕ್ಷಿಣ ದಿಲ್ಲಿ ಮಹಾನಗರ ಪಾಲಿಕೆಯ ಆದೇಶವು ರೆಸ್ಟೋರೆಂಟ್ ಮಾಲಕರನ್ನು ಕಂಗೆಡಿಸಿದೆ. ಈ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಮನಪಾವನ್ನು ಆಗ್ರಹಿಸಲು ರೆಸ್ಟೋರೆಂಟ್ ಮಾಲಕರು ಮುಂದಾಗಿದ್ದಾರೆ.

ಕೊರೋನವೈರಸ್ ಬಿಕ್ಕಟ್ಟಿನಿಂದ ಅನುಭವಿಸಿರುವ ನಷ್ಟದಿಂದ ಚೇತರಿಸಿಕೊಳ್ಳುವ ಯತ್ನದಲ್ಲಿರುವ ಈ ಸಂದರ್ಭದಲ್ಲಿ ಮನಪಾದ ಈ ಆದೇಶವು ವ್ಯವಹಾರಕ್ಕೆ ತೊಡಕನ್ನುಂಟು ಮಾಡಲಿದೆ. ಕಳೆದ ವಾರವಷ್ಟೇ ಕೋಳಿಮಾಂಸ ನಿಷೇಧದ ವಿರುದ್ಧ ಮನಪಾ ಅಧಿಕಾರಿಗಳೊಂದಿಗೆ ವಾದಿಸಿದ್ದೆವು ಮತ್ತು ಕೊನೆಗೂ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿತ್ತು. ಈಗ ಈ ಹಲಾಲ್ ಮಾಂಸದ ಆದೇಶವು ಹೊರಬಿದ್ದಿದೆ ಎಂದು ಫಸ್ಟ್ ಫಿಡ್ಲ್ ಎಫ್ ಆ್ಯಂಡ್ ಬಿಯ ಮಾಲಿಕ ಪ್ರಿಯಾಂಕ್ ಸುಖಿಜಾ ಹೇಳಿದರು. ತಮಗೆ ಯಾವ ಮಾಂಸ (ಹಲಾಲ್ ಅಥವಾ ಝಟ್ಕಾ) ನೀಡಲಾಗುತ್ತದೆ ಎನ್ನುವ ಬಗ್ಗೆ ಗ್ರಾಹಕರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ಅವರು,ಆಮ್ ಆದ್ಮಿ ಪಕ್ಷದ ಸರಕಾರವು ಉದಾರ ನೀತಿಗಳ ಮೂಲಕ ರೆಸ್ಟೋರೆಂಟ್‌ಗಳಿಗೆ ನೆರವಾಗಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಆಡಳಿತವಿರುವ ಮನಪಾ ಹೆಚ್ಚು ಕಠಿಣವಾದ ನಿಯಮಗಳನ್ನು ಹೇರುತ್ತಿದೆ ಎಂದರು.

ಎರಡೂ ವಿಧಗಳ ಮಾಂಸಗಳನ್ನು ದಾಸ್ತಾನಿಡುವುದು ರೆಸ್ಟೋರಂಟ್‌ಗಳಿಗೆ ಕಷ್ಟವಾಗುತ್ತದೆ. ಇವೆರಡೂ ವಿಧಗಳ ಮಾಂಸಗಳ ಪೂರೈಕೆಯನ್ನು ಪಡೆದುಕೊಳ್ಳುವುದೂ ಸುಲಭವಲ್ಲ. ಗ್ರಾಹಕರು ಮಾಂಸವು ಹಲಾಲ್ ಅಥವಾ ಝಟ್ಕಾ ಎನ್ನುವುದನ್ನು ಸರ್ವರ್‌ಗಳಿಗೆ ಕೇಳಿ ತಿಳಿದುಕೊಳ್ಳಬಹುದಾಗಿದೆ ಎಂದು ಎರೋಸಿಟಿಯಲ್ಲಿನ ದರಿಯಾಗಂಜ್ ರೆಸ್ಟೋರಂಟ್‌ನ ಮಾಲಿಕ ಅಮಿತ್ ಬಗ್ಗಾ ಹೇಳಿದರು.

ತನ್ನ ವ್ಯಾಪ್ತಿಯಲ್ಲಿರುವ ರೆಸ್ಟೋರಂಟ್‌ಗಳು ತಾವು ಯಾವ ವಿಧದ ಮಾಂಸವನ್ನು ಒದಗಿಸುತ್ತೇವೆ ಎನ್ನುವುದನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂಬ ಪ್ರಸ್ತಾವಕ್ಕೆ ಮನಪಾ ಕಳೆದ ತಿಂಗಳು ಒಪ್ಪಿಗೆ ನೀಡಿತ್ತು. ಈ ನಿರ್ದೇಶವನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಅದು ನೀಡಿತ್ತು. ಮನಪಾ ಬುಧವಾರ ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿದೆ.

ಸಿಖ್ ಮತ್ತು ಹಿಂದು ಧರ್ಮಗಳಲ್ಲಿ ಹಲಾಲ್ ಆಹಾರದ ಸೇವನೆಯು ನಿಷಿದ್ಧವಾಗಿದೆ ಮತ್ತು ಧರ್ಮದ ವಿರುದ್ಧವಾಗಿದೆ. ಆದ್ದರಿಂದ ರೆಸ್ಟೋರಂಟ್‌ಗಳು ತಮ್ಮಲ್ಲಿ ಲಭ್ಯ ಮಾಂಸದ ಆಹಾರಗಳು ಹಲಾಲ್ ಅಥವಾ ಝಟ್ಕಾ ಎನ್ನುವುದನ್ನು ಬಹಿರಂಗವಾಗಿ ಬರೆದು ಪ್ರದರ್ಶಿಸಬೇಕು ಎಂದು ಪ್ರಸ್ತಾವದಲ್ಲಿ ಹೇಳಲಾಗಿತ್ತು.

ಪೂರ್ವ ದಿಲ್ಲಿ ಮಹಾನಗರ ಪಾಲಿಕೆಯೂ 2018ರಲ್ಲಿ ಇಂತಹುದೇ ಪ್ರಸ್ತಾವವನ್ನು ಅಂಗೀಕರಿಸಿತ್ತು, ಹೆಚ್ಚಿನ ಹಿಂದುಗಳು ಹಲಾಲ್ ಮಾಂಸವನ್ನು ತಿನ್ನುವುದಿಲ್ಲ ಎಂದು ಸ್ಥಾಯಿ ಸಮಿತಿಯು ಆಗ ಪ್ರಸ್ತಾವವನ್ನು ಸಮರ್ಥಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News