ಜ.26ಕ್ಕೆ ಜನಪರ್ಯಾಯ ಪ್ರಜಾಪ್ರಭುತ್ವ ಪಥಸಂಚಲನ, ವಿಚಾರ ಮಂಥನ

Update: 2021-01-22 15:09 GMT

ಮಂಗಳೂರು, ಜ.22: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ಕಾರ್ಮಿಕ ದಲಿತ ಜನಪರ ಚಳವಳಿಗಳ ಒಕ್ಕೂಟಗಳು ಸೇರಿಕೊಂಡು ದ.ಕ. ರೈತ ವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಿ ಜ.26ರಂದು ಮಧ್ಯಾಹ್ನ 2:30ಕ್ಕೆ ಜನಪರ್ಯಾಯ ಪ್ರಜಾಪ್ರಭುತ್ವ ಪಥಸಂಚಲನ, ವಿಚಾರ ಮಂಥನವು ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಿಸಿ ಮಿನಿ ವಿಧಾನಸೌಧದ ಮುಂದೆ ಬಹಿರಂಗ ಸಭೆ ನಡೆಯಲಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ.

ನಗರದ ಡಿವೈಎಫ್ಐ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರೈತಾಪಿ ವರ್ಗದ ತೀವ್ರ ವಿರೋಧದ ನಡುವೆ ಕೂಡ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಹಾಗೂ ಬಳಿಕ ಪ್ರಸ್ತಾಪ ಮಾಡಿದ ವಿದ್ಯುತ್ ಮಸೂದೆ, ನಾಲ್ಕು ಕಾರ್ಮಿಕ ಸಂಹಿತೆಗಳು ರೈತ, ಕಾರ್ಮಿಕರ ಹಿತಕ್ಕೆ ಮಾರಕವಾಗಿ ಕಾರ್ಪೊರೇಟ್ ಉದ್ಯಮಿಗಳ ಪರವಾಗಿ ರೂಪಿಸಲು ಹೊರಟಿರುವುದು ಸರಿಯಲ್ಲ ಎಂದರು.

ಕೃಷಿ ಮಸೂದೆಯಂತೂ ಕೃಷಿ, ಕೃಷಿ ಮಾರುಕಟ್ಟೆ, ಆಹಾರ ಸಾರ್ವಭೌಮತ್ವಕ್ಕೆ ನೀಡುವ ಹೊಡೆತ. ಈ ನಿಟ್ಟಿನಲ್ಲಿ ಎರಡನೇ ಸ್ವಾತಂತ್ರ ಸಂಗ್ರಾಮ ಎಂದೇ ಬಣ್ಣಿಸಲಾಗಿರುವ ಈ ಹೋರಾಟಕ್ಕೆ ರೈತಪರ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಬೀದಿಗಿಳಿದಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರ ಸಂಸದೀಯ ಪ್ರಜಾಪ್ರಭುತ್ವವನ್ನು ದಿಕ್ಕರಿಸಿ ಸರ್ವಾಧಿಕಾರಿ ಯಾಗಿ ವರ್ತಿಸುತ್ತಿದೆ. ಇದನ್ನು ವಿರೋಧಿಸಿ 2020ರ ನವೆಂಬರ್ 26ರಿಂದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ನೇತೃತ್ವದಲ್ಲಿ ದೇಶದ ರೈತ ಸಂಘಟನೆಗಳು ನವದೆಹಲಿ ಸೇರಿದಂತೆ ದೇಶದ ಮೂಲೆಮೂಲೆಯಲ್ಲೂ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿ, ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಯಿತು ಎಂದು ಹೇಳಿದರು.

ಜ. 26 ಭಾರತದ ಗಣರಾಜ್ಯ ದಿನ. ಡಾ.ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ಈ ಗಂಡಾಂತರ ಅರಿತ ದೇಶದ ರೈತರು ಸಮರಧೀರ ಪ್ರತಿರೋಧವನ್ನು ಒಡ್ಡುತ್ತಿದ್ದಾರೆ. ಈ ಸಂದರ್ಭ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವೌಲ್ಯಗಳನ್ನು ಎತ್ತಿ ಹಿಡಿಯಲು ದೇಶದ ಪ್ರಜೆಗಳು ರೈತರ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜನಪರ್ಯಾಯ ಪ್ರಜಾಪ್ರಭುತ್ವ ಪಥಸಂಚಲನ, ವಿಚಾರ ಮಂಥನಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ (ಎಐಕೆಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ದಲಿತ ಸಂಘರ್ಷ (ಅಂಬೇಡ್ಕರ್‌ವಾದ), ದಲಿತ ಹಕ್ಕುಗಳ ಸಮಿತಿ, ದಲಿತ್ ಸೇವಾ ಸಮಿತಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ), ಆಲ್ ಇಂಡಿಯಾ ಯೂತ್ ಫೆಡರೇಶನ್ (ಎಐವೈಎಫ್), ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ), ಜನವಾದಿ ಮಹಿಳಾ ಸಂಘಟನೆ, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲು), ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಗಳು ಹೋರಾಟಕ್ಕೆ ಬೆಂಬಲಿಸಿವೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭ ಡಿವೈಎಫ್ಐ ರಾಜಾಧ್ಯಕ್ಷ ಮುನೀರ್ ಕಾಟಿಪಳ್ಳ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಪ್ರಾಂತ ಸಂಘದ ಖಜಾಂಚಿ ವಾಸುದೇವ ಉಚ್ಚಿಲ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸುನೀಲ್ ಬಜಾಲ್, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಸಹಸಂಚಾಲಕ ಶಬ್ಬೀರ್ ಅಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News