ದ.ಕ. ಜಿಲ್ಲೆಯಲ್ಲಿ ಭಯದ ವಾತಾವರಣ : ವಿಹಿಂಪ, ಬಜರಂಗದಳ ಆರೋಪ

Update: 2021-01-22 15:41 GMT

ಮಂಗಳೂರು, ಜ. 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಮಾಜ ಘಾತುಕ ಕೃತ್ಯಗಳು ಹೆಚ್ಚಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಆರೋಪಿಸಿದೆ.

ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಈ ಎಲ್ಲ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಎಸ್‌ಡಿಪಿಐ, ಪಿಎಫ್ಐ ಯನ್ನು ತಕ್ಷಣ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಪೊಲೀಸರು, ಹಿಂದೂ ಸಮಾಜ, ಮಹಿಳೆಯರು ಮತ್ತು ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ ಭಯದ ವಾತಾವರಣ ನಿರ್ಮಾಣ ಮಾಡಿ, ಧರ್ಮ ವಿರೋಧಿ ಕೃತ್ಯ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಉಗ್ರಗಾಮಿಗಳ ಪರ ಗೋಡೆ ಬರಹ ಬರೆದಿರುವ ಕೃತ್ಯ ಭಯೋತ್ಪಾದನೆಯ ಭಾಗವಾಗಿದೆ. ನಗರದ ಅಳಕೆ ಬಳಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಡ್ರಗ್ಸ್ ಸೇವಿಸಿ ಹಲ್ಲೆ ನಡೆಸಿರುವುದು ಭಯಾನಕ ಕೃತ್ಯವಾಗಿದೆ. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು, ಈ ಸಂಬಂಧ ದುರ್ಗಾವಾಹಿನಿ ವತಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಓವರ್‌ಟೇಕ್ ಮಾಡಿದ ನೆಪದಲ್ಲಿ ರೂಟ್ ನಂ. 23 ಖಾಸಗಿ ಬಸ್ ಚಾಲಕನ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ನಡೆಸಿರುವುದು ಗಂಭೀರ ಪ್ರಕರಣವಾಗಿದೆ. ಈ ಕೃತ್ಯವನ್ನು ವಿಹಿಂಪ ಖಂಡಿಸುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಕೊಲೆಯತ್ನಕ್ಕೆ ಒಳಗಾದ ಸಂಪತ್ ಪೂಜಾರಿ ಅವರನ್ನು ವಿಹಿಂಪ, ಬಜರಂಗದಳ ಪ್ರಮುಖರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಆರೋಪಿ ಅಶ್ರಫ್ ಎಂಬಾತನ ಬಂಧನಕ್ಕೆ ಒತ್ತಾಯಿಸಿ ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ಗೆ ಮನವಿ ಸಲ್ಲಿಸಲಾಗಿತ್ತು ಎಂದರು.

ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ, ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಪ್ರದೀಪ್ ಸರಿಪಳ್ಳ ಉಪಸ್ಥಿತರಿದ್ದರು.

ಜ.25ರಂದು ತೊಕ್ಕೊಟ್ಟಿನಲ್ಲಿ ಪ್ರತಿಭಟನೆ

ಅಂಬ್ಲಮೊಗರುವಿನಲ್ಲಿ ಮಂದಿರ ಕೆಡವಿದ ಆರೋಪಿಗಳ ಬಂಧಿಸಬೇಕು, ತಿಬ್ಲೆಪದವಿನಲ್ಲಿ ಅಕ್ರಮ ಮಸೀದಿ ನಿರ್ಮಾಣ ತಡೆಗಟ್ಟ ಬೇಕು ಎಂದು ಆಗ್ರಹಿಸಿ ವಿಹಿಂಪ, ಬಜರಂಗದಳ ವತಿಯಿಂದ ಜ.25ರಂದು ಸಂಜೆ 4ಕ್ಕೆ ತೊಕ್ಕೊಟ್ಟು ಬಸ್ ನಿಲ್ದಾಣ ಬಳಿ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ. ಉಳ್ಳಾಲ ಭಾಗದಲ್ಲಿ ನಿರಂತರವಾಗಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಮತ್ತು ಹಿಂದು ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News