ಉಡುಪಿ ಜಿಲ್ಲೆಯಲ್ಲಿ 2657 ಮಂದಿಗೆ ಕೋವಿಡ್ ಲಸಿಕೆ

Update: 2021-01-22 15:47 GMT

ಉಡುಪಿ, ಜ.22: ವೈದ್ಯರೂ ಸೇರಿದಂತೆ 5078 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 2657 ಮಂದಿ ಶುಕ್ರವಾರ ಕೊರೋನ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಇದು ದಿನದ ನಿಗದಿತ ಗುರಿಯ ಶೇ.52ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯ ಮೂರು ತಾಲೂಕುಗಳ ಒಟ್ಟು 30 ಸಂಸ್ಥೆಗಳ 56 ಕೇಂದ್ರಗಳಲ್ಲಿ ಇಂದು ಲಸಿಕೆಯನ್ನು ನೀಡಲಾಯಿತು. ಉಡುಪಿ ತಾಲೂಕಿನ 14 (40 ಕೇಂದ್ರ), ಕುಂದಾಪುರ ತಾಲೂಕಿನ 10(10) ಹಾಗೂ ಕಾರ್ಕಳದ 6(6) ಸಂಸ್ಥೆಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಇವುಗಳಲ್ಲಿ ಕುಂದಾಪುರ ತಾಲೂಕಿನಲ್ಲಿ ಅತ್ಯಧಿಕ ಮಂದಿ ಲಸಿಕೆ ಪಡೆದರು.

ಕುಂದಾಪುರ ತಾಲೂಕಿನ ಆಲೂರು ಪಿಎಚ್‌ಸಿಯಲ್ಲಿ ಶೇ.92, ಸಿದ್ಧಾಪುರ, ಶಿರೂರು ಮತ್ತು ಹಾಲಾಡಿ ಪಿಎಚ್‌ಸಿಗಳಲ್ಲಿ ತಲಾ 89 ಹಾಗೂ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಶೇ.89 ಮಂದಿ ಲಸಿಕೆ ಪಡೆದರೆ, ಉಡುಪಿ ತಾಲೂಕಿನಲ್ಲಿ ಅತ್ಯಧಿಕ ಲಸಿಕೆಯನ್ನು ಉಡುಪಿ ಪಿಎಚ್‌ಸಿಯಲ್ಲಿ ಶೇ.74 ಮಂದಿ ಪಡೆದರು.

ಮಣಿಪಾಲ ಕೆಎಂಸಿಯ 10 ಕೇಂದ್ರಗಳಲ್ಲಿ 1000 ಮಂದಿ ಲಸಿಕೆ ಪಡೆಯ ಬೇಕಿದ್ದು 242 ಮಂದಿ ಮಾತ್ರ ಇಂದು ಪಡೆದಿದ್ದಾರೆ. ಉಡುಪಿ ಪಿಎಚ್‌ಸಿಯಲ್ಲಿ ನಿಗದಿತ 875 ಮಂದಿಯಲ್ಲಿ 639 ಮಂದಿ ಪಡೆದರು. ಆಲೂರು ಪಿಎಚ್‌ಸಿಯ ನಿಗದಿತ 79 ಮಂದಿಯಲ್ಲಿ 73 ಮಂದಿ, ನಂದಳಿಕೆಯ 18ರಲ್ಲಿ 16 ಮಂದಿ, ಸಿದ್ಧಾಪುರದ 90ರಲ್ಲಿ 80 ಮಂದಿ, ಶಿರೂರಿನ 86ರಲ್ಲಿ 73 ಮಂದಿ ಲಸಿಕೆ ಪಡೆದಿದ್ದಾರೆ.

ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್‌ನ ಮೊದಲ ಹಂತದಲ್ಲಿ ಜಿಲ್ಲೆಯ ಒಟ್ಟು 22,103 ಮಂದಿ ಕೊರೋನಾ ವಾರಿಯರ್ಸ್‌ಗೆ ಲಸಿಕೆಯನ್ನು ನೀಡುವ ಗುರಿ ಹೊಂದಿದ್ದು, ಇದುವರೆಗೆ ಲಸಿಕೆ ಪಡೆಯಬೇಕಿದ್ದ 8976 ಮಂದಿಯಲ್ಲಿ 4816 ಮಂದಿ ಮಾತ್ರ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಶೇ.53.7ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News