ರೈತರ ಗಣರಾಜ್ಯೋತ್ಸವ ದಿನದ ಟ್ರ್ಯಾಕ್ಟರ್ ‌ರ‍್ಯಾಲಿಗೆ ಅನುಮತಿ ನೀಡಿದ ದಿಲ್ಲಿ ಪೊಲೀಸರು

Update: 2021-01-23 14:17 GMT

ಹೊಸದಿಲ್ಲಿ,ಜ.23: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ಜ.26 ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ಕೈಗೊಳ್ಳಲಾಗುವುದು ಎಂದು ನಿರ್ಧರಿಸಿದ್ದರು. ಈ ರ್ಯಾಲಿಯ ಕುರಿತಾದಂತೆ ಪರಿಸ್ಥಿತಿ ಅವಲೋಕನ ನಡೆಸಿ ದಿಲ್ಲಿ ಪೊಲೀಸರೇ ತೀರ್ಮಾನಿಸಲಿ ಎಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿತ್ತು. ಇದೀಗ ದಿಲ್ಲಿ ಪೊಲೀಸರು ರೈತರ ಟ್ರ್ಯಾಕ್ಟರ್‌ ರ್ಯಾಲಿಗೆ ಅನುಮತಿ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಒಂದೂವರೆ ವರ್ಷಗಳ ಕಾಲ ವಿವಾದಿತ ಕೃಷಿ ಕಾಯ್ದೆಗಳನ್ನು ತಡೆಹಿಡಿಯುವ ಕೇಂದ್ರ ಸರಕಾರದ ಪ್ರಸ್ತಾವವನ್ನು ರೈತ ಮುಖಂಡರು ತಿರಸ್ಕರಿಸಿದ್ದರು. ಈ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದೆಗೆಯದೇ ಇದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಹೇಳಿಕೆ ನೀಡಿದ್ದರು.

ದಿಲ್ಲಿಯ ನೆರೆಯ ರಾಜ್ಯಗಳಾದ ಹರ್ಯಾಣ, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ರ್ಯಾಲಿಯು ಹಿಂಸಾ ಸ್ವರೂಪಕ್ಕೆ ತಿರುಗಬಹುದೆಂದು ಕೇಂದ್ರ ಸರಕಾರದ ಹಲವು ಅಧಿಕಾರಿಗಳು ಹೇಳಿಕೆ ನೀಡಿದ್ದು, ಈ ರ್ಯಾಲಿಯಲ್ಲಿ ಯಾವುದೇ ಶಾಂತಿ ಭಂಗ ಪ್ರಕರಣಗಳು ನಡೆಯುವುದಿಲ್ಲ. ರ್ಯಾಲಿಯು ಶಾಂತಿಯುತವಾಗಿರಲಿದೆ ಎಂದು ರೈತ ಮುಖಂಡರು ಹೇಳಿಕೆ ನೀಡಿದ್ದಾಗಿ ndtv.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News