ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದ ಮರುಪರಿಶೀಲನೆ: ಬೈಡನ್ ಸರಕಾರ ಘೋಷಣೆ

Update: 2021-01-23 18:13 GMT

ವಾಶಿಂಗ್ಟನ್, ಜ. 23: ತಾಲಿಬಾನ್ ಜೊತೆಗೆ ಅಮೆರಿಕ ಮಾಡಿಕೊಂಡಿರುವ ಶಾಂತಿ ಒಪ್ಪಂದವನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ರ ನೂತನ ಸರಕಾರ ಶುಕ್ರವಾರ ತಿಳಿಸಿದೆ. ಒಪ್ಪಂದದ ಶರತ್ತುಗಳಿಗೆ ಅನುಸಾರವಾಗಿ, ಅಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಕಡಿಮೆ ಮಾಡಿದೆಯೇ ಎನ್ನುವುದನ್ನು ಅಮೆರಿಕ ಪರಿಶೀಲಿಸಲಿದೆ.

ಅಫ್ಘಾನಿಸ್ತಾನದಲ್ಲಿ ಭದ್ರತೆಯ ಖಾತರಿಯನ್ನು ನೀಡಿದರೆ ಹಾಗೂ ಅಫ್ಘಾನ್ ಸರಕಾರದೊಂದಿಗೆ ಶಾಂತಿ ಮಾತುಕತೆ ನಡೆಸುವ ಬದ್ಧತೆಯನ್ನು ತಾಲಿಬಾನ್ ವ್ಯಕ್ತಪಡಿಸಿದರೆ, ಅದಕ್ಕೆ ಪ್ರತಿಯಾಗಿ ಆ ದೇಶದಿಂದ ಅಮೆರಿಕದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಶಾಂತಿ ಒಪ್ಪಂದವು ಕಳೆದ ವರ್ಷ ಅಮೆರಿಕ ಸರಕಾರ ಮತ್ತು ತಾಲಿಬಾನ್ ನಡುವೆ ಏರ್ಪಟ್ಟಿತ್ತು.

ಆದರೆ, ಉಭಯ ಬಣಗಳು ಸೆಪ್ಟಂಬರ್‌ನಿಂದಲೇ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಾ ಬಂದರೂ, ಅಫ್ಘಾನ್‌ನಾದ್ಯಂತ ಹಿಂಸಾಚಾರ ವ್ಯಾಪಕವಾಗಿ ಹರಡಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲಿವಾನ್ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್ದುಲ್ಲಾ ಮುಹಿಬ್ ಜೊತೆ ಮಾತನಾಡಿ, ಶಾಂತಿ ಒಪ್ಪಂದವನ್ನು ಮರುಪರಿಶೀಲಿಸುವ ಅಮೆರಿಕದ ಉದ್ದೇಶವನ್ನು ಸ್ಪಷ್ಟಪಡಿಸಿದರು ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಎಮಿಲಿ ಹಾನ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News